ಕಾರ್ಯಕರ್ತೆ ರೆಹಾನಾ ಫಾತಿಮಾರ ಕೊಚ್ಚಿ ನಿವಾಸ
ಕೊಚ್ಚಿ: ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಗೆ ಪ್ರವೇಶ ಮಾಡಲು ಯತ್ನಿಸಿದ್ದ ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರ ಕೊಚ್ಚಿ ನಿವಾಸದ ಮೇಲೆ ದಾಳಿಯಾಗಿದ್ದು, ಮನೆಯ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಅತ್ತ ರೆಹಾನಾ ಫಾತಿಮಾ ಶಬರಿಮಲೆ ಗುಡ್ಡ ಹತ್ತುತ್ತಿದ್ದಂತೆಯೇ ಇತ್ತ ಆಕ್ರೋಶಿತ ಗುಂಪೊಂದು ಕೊಚ್ಚಿಯಲ್ಲಿ ಆಕೆಯ ಮನೆಯನ್ನು ಧ್ವಂಸಗೊಳಿಸಿದೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಉದ್ರಿಕ್ತ ಗುಂಪು ಚದುರಿದ್ದು, ಪ್ರಸ್ತುತ ರೆಹಾನಾ ಫಾತಿಮಾ ಅವರ ಮನೆಯ ಬಳಿ ಪೊಲೀಸ್ ಜೀಪೊಂದು ಮೊಕ್ಕಾಂ ಹೂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನು ಶುಕ್ರವಾರ 300 ಮಂದಿ ಸೇನಾ ಸಿಬ್ಬಂದಿ ನಡುವೆ ಹೆಲ್ಮೆಟ್ ಧರಿಸಿ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡು ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶ ಮೂಲಕ ಮಹಿಳಾ ಪತ್ರಕರ್ತೆ ಶಬರಿಮಲೆಗೆ ತೆರಳಿದ್ದರು. ಆದರೆ ಸನ್ನಿಧಾನಂಗೆ ಸಮೀಪದಲ್ಲಿರುವ ವಳಿಯ ನದಪ್ಪಂಧಲ್ ನಲ್ಲಿಯೇ ಪ್ರತಿಭಟನಾಕಾರರು ಅವರನ್ನು ತಡೆದಿದ್ದಾರೆ. ಈ ವೇಳೆ ಕೇರಳ ಪೊಲೀಸ್ ವರಿಷ್ಠಾಧಿಕಾರಿಗಳು ಸಂಧಾನ ನಡೆಸಿದ್ದು, ಅಲ್ಲದೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನಿ ಅರ್ಚಕರೂ ಕೂಡ ದೇಗುಲದ ಬಾಗಿಲು ಹಾಕಿ ಬಿಡುವುದಾಗಿ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಅವರನ್ನು ಶಬರಿಮಲೆಯಿಂದ ವಾಪಸ್ ಕಳುಹಿಸಲಾಯಿತು.