ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್
ತಿರುವನಂತಪುರಂ: ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಲ್ಲ, ಇಲ್ಲಿ ಯಾವುದೇ ರೀತಿಯ ಮೇಲುಗೈ ಸಾಧನೆ ಎಂಬುದಕ್ಕಿಂತ ಕಾನೂನು ಸುವ್ಯವಸ್ಥೆ ರಕ್ಷಣೆಯೇ ನಮಗೆ ಮುಖ್ಯ ಎಂದು ಕೇರಳ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.
ಪ್ರಸಿದ್ಧ ಪವಿತ್ರ ಯಾತ್ರಾ ತಾಣ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಪ್ರವೇಶ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಓರ್ವ ಮಹಿಳಾ ಪತ್ರಕರ್ತೆ ಮತ್ತು ಓರ್ವ ಮಹಿಳಾ ಕಾರ್ಯಕರ್ತರು ಶಬರಿಮಲೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಸೂಕ್ತ ಭದ್ರತೆ ಕೂಡ ನೀಡಲಾಗಿದೆ.
ಇಲ್ಲಿ ಯಾರ ಪ್ರತಿಷ್ಟೆಯ ಪ್ರಶ್ನೆಯೂ ಇಲ್ಲ. ಸುಪ್ರೀಂ ಕೋರ್ಟ್ ಆದೇಶದ ಪಾಲನೆ ಮತ್ತು ಅದರ ಜೊತೆ ಜೊತೆಗೇ ಕಾನೂನು ಸುವ್ಯವಸ್ಥೆ ಕೂಡ ಮುಖ್ಯ. ಶಾಂತಿ ಹಾಳಾಗುವುದು ನಮಗೆ ಬೇಕಿಲ್ಲ. ಮಹಿಳಾ ಶಕ್ತಿ ಪ್ರದರ್ಶನಕ್ಕೆ ಶಬರಿಮಲೆ ವೇದಿಕೆಯಾಗುವುದು ಸರಿಯಲ್ಲ. ಶಕ್ತಿ ಪ್ರದರ್ಶನಕ್ಕೆ ಇದು ಸೂಕ್ತ ಪರಿಸ್ಥಿತಿಯೂ ಅಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.