ನವದೆಹಲಿ: ಅಮೃತಸರ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲು ಚಾಲನಕನ ವಿರುದ್ಧ ಯಾವುದೇ ರೀತಿಯ ಕ್ರಮಕ್ಕೆ ತಾನು ಮುಂದಾಗುವುದಿಲ್ಲ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ 61 ಜನರ ಧಾರುಣ ಸಾವಿಗೆ ಕಾರಣವಾದ ಅಮೃತಸರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಇಲಾಖೆ, ದುರಂತದಲ್ಲಿ ರೈಲ್ವೇ ಇಲಾಖೆಯಿಂದ ಯಾವುದೇ ರೀತಿಯ ದೋಷವಾಗಿಲ್ಲ. ಅಲ್ಲದೆ ಸ್ಥಳೀಯ ಆಡಳಿತ ಕೂಡ ದಸರಾ ಕಾರ್ಯಕ್ರಮದ ಕುರಿತು ರೈಲ್ವೇ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಅಲ್ಲದೆ ದಸರಾ ಆಚರಣೆ ಕುರಿತು ರೈಲು ಚಾಲಕನಿಗೂ ಮಾಹಿತಿ ಇರಲಿಲ್ಲ. ಹೀಗಾಗಿ ಆತನ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ತಿಳಿದುಬಂದಿದೆ.
ದಸರಾ ರಾವಣ ಸಂಹಾರ ಕಾರ್ಯಕ್ರಮದ ಕುರಿತು ಜಿಲ್ಲಾಡಳಿತವಾಗಲಿ ಅಥವಾ ಕಾರ್ಯಕ್ರಮದ ಆಯೋಜರಾಗಲಿ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಹೀಗಿರುವಾಗಿ ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಯಾರಿಗೆ ತಿಳಿದಿರುತ್ತದೆ. ಸಾಮಾನ್ಯದಂತೆಯೇ ಅಂದೂ ಕೂಡ ಆ ಮಾರ್ಗದಲ್ಲಿ ರೈಲು ಬಿಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಅಂತೆಯೇ ಲೆವೆಲ್ ಕ್ರಾಸಿಂಗ್ ಸಿಬ್ಬಂದಿ ಮತ್ತು ರೈಲು ಚಾಲಕನ ಮೇಲೂ ಕ್ರಮ ಕೈಗೊಳ್ಳಲು ಇಲಾಖೆ ಹಿಂದೇಟು ಹಾಕಿದ್ದು, ಪ್ರಕರಣದಲ್ಲಿ ಸಿಬ್ಬಂದಿಗಳ ಪಾತ್ರವೇನೂ ಇಲ್ಲ. ಘಟನೆ ನಡೆದಿರುವುದು ಲೆವೆಲ್ ಕ್ರಾಸಿಂಗ್ ಬಳಿಯಲ್ಲ. ಬದಲಿಗೆ 2 ನಿಲ್ದಾಣಗಳ ನಡುವೆ. ಹೀಗಾಗಿ ಇದರಲ್ಲಿ ಲೆವೆಲ್ ಕ್ರಾಸಿಂಗ್ ಸಿಬ್ಬಂದಿ ಪಾತ್ರವಿಲ್ಲ ಎಂದೂ ಇಲಾಖೆಯ ಅಧಿಕಾರಿ ಲೊಹಾನಿ ಸ್ಪಷ್ಟಪಡಿಸಿದ್ದಾರೆ.
ಮೇಲ್ನೋಟಕ್ಕೆ ಇದು ಸ್ಪಷ್ಟ ಅತಿಕ್ರಮಣ ಪ್ರಕರಣವಾಗಿದ್ದು, ಇದರಲ್ಲಿ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೈಲು ಚಾಲಕ ಮತ್ತು ಲೆವೆಲ್ ಕ್ರಾಸಿಂಗ್ ಸಿಬ್ಬಂದಿಗಳ ವಿರುದ್ಧ ಯಾವುದೇ ರೀತಿಯ ತನಿಖೆ ಇಲ್ಲ ಎಂದು ಲೊಹಾನಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos