ನವದೆಹಲಿ: ಶಬರಿಮಲೆ ದಕ್ಷಿಣ ಭಾರತದ ಅಯೋಧ್ಯೆಯಿದ್ದಂತೆ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ ಭಕ್ತರಿಗೆ ಧನ್ಯವಾದಗಳು ಎಂದು ವಿಶ್ವ ಹಿಂದೂ ಪರಿಷತ್ ಶನಿವಾರ ಹೇಳಿದೆ.
ಶಬರಿಮಲೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿಹೆಚ್'ಪಿ ವಕ್ತಾರ ವಿನೋದ್ ಬನ್ಸಾಲ್ ಅವರು, ಶಬರಿಮಲೆ ದಕ್ಷಿಣ ಭಾರತದ ಅಯೋಧ್ಯೆಯಿದ್ದಂತೆ. ಯಾವುದೇ ವಯೋಮಾನದ ಮಹಿಳೆಯರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಭಕ್ತರು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟಿಸುತ್ತಿರುವವರಿಗೆ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ.
ಸಿತಾರಾಮ್ ಯೆಚೂರಿಯವರು ಸ್ವತಃ ತಾವೇ ಶಬರಿಮಲೆಯನ್ನು ಅಯೋಧ್ಯೆಗೆ ಹೋಲಿಕೆ ಮಾಡಿರುವುದು ಉತ್ತಮವಾಗಿದೆ. ಹೌದು, ಶಬರಿಮಲೆ ದಕ್ಷಿಣ ಭಾರತದ ಅಯೋಧ್ಯೆಯೇ. ಶಬರಿಮಲೆಯ ಪವಿತ್ರತೆ, ಧಾರ್ಮಿಕ ನಂಬಿಕೆಗಳ ಮೇಲೆ ದಾಳಿಯಾಗುತ್ತಿರುವುದನ್ನು ನೋಡಿದರೆ ಸಿಪಿಐ(ಎಂ)ನ ವಾಸ್ತವಿಕತೆ ಬಹಿರಂಗಗೊಳ್ಳುತ್ತಿದೆ. ಕೇರಳ ಕ್ರೈಸ್ತ ಸನ್ಯಾಸಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಕಣ್ಣು ಕಾಣದಂತೆ ವರ್ತಿಸುತ್ತಿದೆ. ದೇಗುಲದ ಪವಿತ್ರತೆಯನ್ನು ಉಳಿಸುವ ಸಲುವಾಗಿ ಜನರು ಪ್ರತಿಭಟನೆ ನಡೆಸುತ್ತಿರುವುದನ್ನು ಪ್ರಶಂಸಿಸುತ್ತೇನೆಂದು ತಿಳಿಸಿದ್ದಾರೆ.