ಭಾರತ-ಚೀನಾ ಯುದ್ಧದ 56 ವರ್ಷಗಳ ನಂತರ ಅರುಣಾಚಲ ಪ್ರದೇಶದ ಗ್ರಾಮಸ್ಥರಿಗೆ ತಲುಪಿದ ಪರಿಹಾರ ಮೊತ್ತ!
ಬೊಮಿಡಿಲಾ: ಭಾರತ-ಚೀನಾ ನಡುವಿನ ಯುದ್ಧ ನಡೆದು 56 ವರ್ಷಗಳ ನಂತರ ಅರುಣಾಚಲ ಪ್ರದೇಶದ ಗ್ರಾಮಸ್ಥರಿಗೆ ಪರಿಹಾರ ದೊರೆತಿದೆ.
ಯುದ್ಧದ ವೇಳೆ ಬಂಕರ್, ಬ್ಯಾರಕ್ಸ್ ಗಳನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಪಶ್ಚಿಮ ಕಮೆಂಗ್ ಜಿಲ್ಲೆಯ ಗ್ರಾಮಸ್ಥರಿಂದ ವಶಪಡಿಸಿಕೊಳ್ಳಲಾಗಿದ್ದ ಭೂಮಿಗೆ ಈ ವರೆಗೂ ಪರಿಹಾರ ಮೊತ್ತ ಸಿಕ್ಕಿರಲಿಲ್ಲ. ಈಗ 56 ವರ್ಷಗಳ ಬಳಿಕ ಸಂತ್ರಸ್ತರಿಗೆ 38 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.
"ಗ್ರಾಮಸ್ಥರಿಗೆ ಒಟ್ಟಾರೆ 37.73 ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಲಾಗಿದ್ದು, ಗ್ರಾಮಸ್ಥರಿಗೆ ಶೀಘ್ರವೇ ವಿತರಣೆಯಾಗಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆ ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಹಾಗೂ ಇನ್ನಿತರ ಮೂಲಸೌಕರ್ಯಗಳಿಗಾಗಿ ಗ್ರಾಮಸ್ಥರಿಂದ ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದರೆ ಈ ವರೆಗೂ ಭೂಮಿಯನ್ನು ಕಳೆದುಕೊಂಡಿದ್ದ ಮಾಲಿಕರಿಗೆ ಪರಿಹಾರ ನೀಡಿರಲಿಲ್ಲ. ಈ ವಿಷಯವನ್ನು ಅರುಣಾಚಲ ಪ್ರದೇಶದವರೇ ಆದ ಕೇಂದ್ರ ಸಚಿವ ಕಿರಣ್ ರಿಜಿಜು ರಕ್ಷಣಾ ಇಲಾಖೆಯ ಗಮನಕ್ಕೆ ತಂದಿದ್ದರು. ಈಗ ರಕ್ಷಣಾ ಇಲಾಖೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ.