ರಾಜಕೀಯ ದ್ವೇಷ ಸಾಧನೆಗೆ ಸಿಬಿಐ ಒಂದು ಅಸ್ತ್ರ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಸಿಬಿಐ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ...
ನವದೆಹಲಿ: ಸಿಬಿಐ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಎನ್ ಡಿಎ ಸರ್ಕಾರ ರಾಜಕೀಯ ದ್ವೇಷ ಸಾಧಿಸಲು ಸಿಬಿಐ ಅನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಎರಡನೇ ಸ್ಥಾನದಲ್ಲಿರುವ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ನಡುವಿನ ಸಂಘರ್ಷ ಹೊಸ ತಿರುವು ಪಡೆದಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಆಸ್ಥಾನಾ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಯೇ ಎಫ್‌ಐಆರ್ ದಾಖಲಿಸಿದೆ.
ಪ್ರಧಾನಿ ಮೋದಿ ಅವರ ನೀಲಿಗಣ್ಣಿನ ಹುಡುಗ, ಗುಜರಾತ್ ಕೇಡರ್ ನ ಅಧಿಕಾರಿ, ಗೋದ್ರಾ ಎಸ್ಐಟಿ ಅಧಿಕಾರಿಗೆ ಸಿಬಿಐನಲ್ಲಿ ಎರಡನೇ ಸ್ಥಾನ ನೀಡಲಾಗಿದ್ದು, ಈಗ ಸ್ವತಃ ಅವರೇ ಭ್ರಷ್ಟಚಾರದಲ್ಲಿ ಸಿಲುಕಿದ್ದಾರೆ. ಮೋದಿ ಆಡಳಿತದಲ್ಲಿ ಸಿಬಿಐ ರಾಜಕೀಯ ದ್ವೇಷ ಸಾಧಿಸಲು ಒಂದು ಅಸ್ತ್ರ. ಈಗ ಕೇಂದ್ರ ತನಿಖಾ ಸಂಸ್ಥೆಯ ಒಳ ಜಗಳ ಬೀದಿಗೆ ಬಂದಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ವಿವಾದಾತ್ಮಕ ಮಾಂಸ ರಫ್ತುದಾರ ಮೊಯಿನ್ ಖುರೇಷಿಗೆ ಸಂಬಂಧಿಸಿದ ಉದ್ಯಮಿಯೊಬ್ಬರಿಗೆ 2 ಕೋಟಿ ರುಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಅಸ್ಥಾನಾ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.