ದೇಶ

ಅಮೃತಸರ ರೈಲು ದುರಂತ: ಹಳಿಗಳಿಂದ ದೂರವಿರುವಂತೆ ಜನರಿಗೆ ಪದೇ ಪದೇ ಮನವಿ ಮಾಡಿದ್ದೆ- ಆಯೋಜಕ

Manjula VN
ಚಂಡೀಗಢ: ದಸರಾ ಹಬ್ಬದ ಹಿನ್ನಲೆಯಲ್ಲಿ ರಾವಣ ದಹನ ಸಂದರ್ಭದಲ್ಲಿ ಅಮೃತಸರದಲ್ಲಿ ಸಂಭವಿಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ರೈಲ್ವೇ ಹಳಿಯಿಂದ ದೂರವಿರುವಂತೆ ಜನರ ಬಳಿ ಪದೇ ಪದೇ ಮನವಿ ಮಾಡಿಕೊಂಡಿದ್ದ ಎಂದು ಹೇಳಿದ್ದಾರೆ. 
ಕಾರ್ಯಕ್ರಮ ಆಯೋಜಕರನ್ನು ಸೌರಭ್ ಮದಾನ್ ಮಿಥು ಎಂದು ಹೇಳಲಾಗುತ್ತಿದ್ದು, ಇವರು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹಾಗೂ ಅವರ ಪತ್ನಿ ನವಜೋತ್ ಕೌರ್ ಅವರಿಗೆ ಆಪ್ತ ಸ್ನೇಹಿತರೆಂದು ಹೇಳಲಾಗುತ್ತಿದೆ. 
ವಿಡಿಯೋದಲ್ಲಿ ಹೇಳಿಕೆ ನೀಡಿರುವ ಸೌರಭ್, ದುರಂತದಲ್ಲಿ ನನ್ನ ಮತ್ತು ಇತರೆ ಆಯೋಜಕರ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ. 
ಕಾರ್ಯಕ್ರಮ ಹಿನ್ನಲೆಯಲ್ಲಿ ಅಗತ್ಯವಿದ್ದ ಎಲ್ಲಾ ರೀತಿಯ ಅನುಮತಿಗಳನ್ನು ಪಡೆಯಲಾಗಿತ್ತು. ದಸರಾ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಹಾಗೂ ತೊಡಕುಗಳು ಎದುರಾಗಬಾರದೆಂದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೈದಾನದಿಂದ ಹೊರಗೆ ರೈಲ್ವೇ ಹಳಿಗಳ ಮೇಲೆ ಜನರು ನಿಂತಿದ್ದರು. ಈ ವೇಳೆ ರೈಲ್ವೇ ಹಳಿಗಳಿಂದ ದೂರವಿರುವಂತೆ ಜನರ ಬಳಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೆವು. ಆದರೆ, ಜನರು ನಮ್ಮ ಮನವಿಗಳಿಗೆ ಕಿವಿಗೊಡಲಿಲ್ಲ. 
ರಾವಣನ ಪ್ರತಿಕೃತಿಯನ್ನು ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ದಹನ ಮಾಡಲಾಗಿತ್ತು. ಈ ವೇಳೆ ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಗಳೂ ಇದ್ದರು ಎಂದು ಹೇಳಿಕೊಂಡಿದ್ದಾನೆ. 
ಇನ್ನು ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವ್ಯಕ್ತಿ ಆಯೋಜಕ ಮದನ್ ಹಾಗೂ ನವಜೋತ್ ಕೌರ್ ಅವರ ಸಮ್ಮುಕದಲ್ಲಿಯೇ ಜನರನ್ನು ಪ್ರೇರೇಪಿಸುವ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬಂದಿದೆ. ಹಳಿಗಳ ಬಳಿ 5 ಸಾವಿರನ ಜನರಿದ್ದರೂ, 500 ರೈಲುಗಳು ಮುಂದಕ್ಕೆ ಸಾಗಿದರೂ ಜನರು ಮಾತ್ರ ಹಳಿಗಳಿಂದ ದೂರ ಹೋಗುವುದಿಲ್ಲ ಎಂದು ಹೇಳಿರುವುದು ಕಂಡು ಬಂದಿದೆ. 
ಇದಾದ ಕೆಲವೇ ಸೆಕೆಂಡ್ ಗಳಲ್ಲಿ ಹಳಿಗಳ ಮೇಲೆ ಎರಡು ರೈಲುಗಳು ಸಾಗಿದ್ದು, 59 ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಈ ವರೆಗೂ ಪಂಜಾಬ್ ಪೊಲೀಸರು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. 
SCROLL FOR NEXT