ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರಿಗೆ ರಜೆ ನೀಡಿರುವುದನ್ನು ಕೇಂದ್ರ ಸರ್ಕಾರ ಬುಧವಾರ ಸಮರ್ಥಿಸಿಕೊಂಡಿದೆ.
ಈ ಕುರಿತಂತೆ ರಾಜಧಾನಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜೇಟ್ಲಿಯವರು ಸಿಬಿಐ ನಿರ್ದೇಶಕ ಹಾಗೂ ವಿಶೇಷ ನಿರ್ದೇಶಕರು ಆರೋಪಗಳನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಹಿರಿಯ ಅಧಿಕಾರಿಗಳೇ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ಅಧಿಕಾರಿಗಳು ಆರೋಪ ಹೊತ್ತಿರುವಾಗ ಪ್ರಕರಣದ ತನಿಖೆ ನಡೆಸುವವರಾದರೂ ಯಾರು? ಈ ಕಾರಣದಿಂದಲೇ ಸಿಬಿಐ ಸಮಗ್ರತೆಯನ್ನು ಕಾಪಾಡುವ ಸಲುವಾಗಿ ಅಧಿಕಾರಿಗಳಿಗೆ ರಜೆ ನೀಡಿ ಹೊಸ ನಿರ್ದೇಶಕರನ್ನು ನೇಮಕ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಬ್ಬರೂ ಅಧಿಕಾರಿಗಳ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಿಬಿಐ ಸಮಗ್ರತೆ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸುವ ಉದ್ದೇಶದಿಂದ ನೇಮಕ ಸಮಿತಿ ಶಿಫಾರಸನ್ನು ಸರ್ಕಾರ ಜಾರಿಗೊಳಿಸಿದೆ. ತನಿಖೆ ಬಳಿಕ ಇಬ್ಬರೂ ಆರೋಪದಿಂದ ಮುಕ್ರರಾಗಿ ಹೊರಬಂದರೆ ಅಧಿಕಾರಕ್ಕೆ ಹಿಂದಿರುಗುತ್ತಾರೆಂದಿದ್ದಾರೆ.
ಇದೇ ವೇಳೆ ರಫೇಲ್ ಒಪ್ಪಂದ ಕುರಿತಂತೆ ತನಿಖೆ ನಡೆಸಲು ಉದ್ದೇಶಿಸಿದ್ದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳ ಆರೋಪಗಳ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರಿಗಳು ಯಾವ ವಿಚಾರಗಳ ಬಗಗೆ ಚಿಂತನೆ ನಡೆಸುತ್ತಿದ್ದಾರೆಂಬ ಮಾಹಿತಿಗಳು ವಿರೋಧ ಪಕ್ಷಗಳಿಗೆ ದೊರಕಿರುವುದು ಅವರ ಆರೋಪಗಳಿಂದ ಸಾಬೀತಾಗುತ್ತಿದೆ. ಅಧಿಕಾರಿಗಳಿಗೆ ಬೆಂಬಲ ನೀಡುವ ಮೂಲಕ ವಿರೋಧ ಪಕ್ಷಗಳು ಅಧಿಕಾರಿಯ ವಿಶ್ವಾಸಾರ್ಹತೆಯನ್ನು ನಾಶಮಾಡಿದ್ದಾರೆಂದು ಹೇಳಿದ್ದಾರೆ.