ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ, ರಜನಿಂಕಾತ್ ಕೆಲವರ ಕೈಯಲ್ಲಿ 'ಸೂತ್ರದ ಬೊಂಬೆ'ಯಾಗಿದ್ದು, ಕೋಮುವಾದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ರಜನಿಕಾಂತ್ ಅವರು ರಾಜಕೀಯ ಪಕ್ಷ ಆರಂಭಿಸುವ ಮುನ್ನ ರಜನಿ ಮಕ್ಕಳ್ ಮಂಡ್ರಮ್(ಆರ್ ಎಂಎಂ) ಎಂಬ ವೇದಿಕೆ ಆರಂಭಿಸಿದ್ದನ್ನು ಡಿಎಂಕೆ ತನ್ನ ಮುಖವಾಣಿ ಮುರಸೋಳಿಯಲ್ಲಿ ಪ್ರಶ್ನಿಸಿದೆ.
ರಾಜಕೀಯದಲ್ಲಿ ಹಣದ ಮತ್ತು ಹುದ್ದೆಯ ಮೋಹದಲ್ಲಿ ಬದಲಾವಣೆ ತರಲು ಉತ್ತೇಜನ ನೀಡಬೇಕು ಎಂದು ತಮ್ಮ ಆರ್ ಎಂಎಂ ಸದಸ್ಯರಿಗೆ ಹೇಳಿದ್ದರು. ಅಲ್ಲದೆ ತಮ್ಮ ರಾಜಕೀಯದಲ್ಲಿ ಹಣ ಮತ್ತು ಹುದ್ದೆಗೆ ಮಹತ್ವ ನೀಡುವುದಿಲ್ಲ ಎಂದು ತಿಳಿಸಿದ್ದರು.
ರಜನಿಕಾಂತ್ ಅವರು ಮುಗ್ದ ಅಭಿಮಾನಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ನಟ ರಜನಿಕಾಂತ್ ಅವರಿಗೆ ನಿಜಕ್ಕೂ ಹುದ್ದೆಯ ಮೋಹ ಇಲ್ಲದಿದ್ದರೆ ರಾಷ್ಟ್ರೀಯವಾದಿ ಇವಿ ರಾಮಸ್ವಾಮಿ ಪೆರಿಯಾರ್ ರೀತಿಯ ಚಳವಳಿ ಆರಂಭಿಸಬೇಕಿತ್ತು. ರಾಜಕೀಯ ಪಕ್ಷ ಘೋಷಿಸಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು ಏಕೆ? ಎಂದು ಡಿಎಂಕೆ ಪ್ರಶ್ನಿಸಿದೆ.