ನವದೆಹಲಿ: ಮೊಬೈಲ್ ನೆಟ್ವರ್ಕ್, ದೂರವಾಣಿ ಸೇವಾ ಸಂಸ್ಥೆಗಳು ಕೂಡಲೇ ಆಧಾರ್ ಆಧಾರಿತ ಇ-ಕೆವೈಸಿಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಮೊಬೈಲ್ ಸಿಮ್ ಕಾರ್ಡ್ ಗೆ ಸಂಬಂಧಿಸಿದ ಇ-ಕೆವೈಸಿ ಮತ್ತು ಹೊಸ ಸಿಮ್ ಕಾರ್ಡ್ ಅಥವಾ ಕನೆಕ್ಷನ್ ಗಾಗಿ ಗ್ರಾಹಕ ಅಥವಾ ಬಳಕೆದಾರರಿಂದ ಆಧಾರ್ ಕಾರ್ಡ್ ಕೇಳದಂತೆ ಟೆಲಿಕಾಂ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೊಬೈಲ್ ಸೇವೆಗಾಗಿ ಆಧಾರ್ ಕಡ್ಡಾಯ ಮಾಡದತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ಮೊದಲ ಹಂತ ಎಂಬಂತೆ ಟೆಲಿಕಾಂ ಸೇವಾ ಸಂಸ್ಥೆಗಳಿಗೆ ಸೂಚನೆ ರವಾನಿಸಿದೆ.
ಕಳೆದ ತಿಂಗಳ ಆಧಾರ್ ಅಸ್ಥಿತ್ವವನ್ನೇ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಸಿಮ್ ಕಾರ್ಡ್ ಗಾಗಿ ಅಥವಾ ದೂರವಾಣಿ ಸೇವೆಗಳಿಗಾಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರು ಆಧಾರ್ ನೀಡುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿತ್ತು.