ಸಿಬಿಐ ನಿರ್ದೇಶಕ ಅಲೋಕ್ ವರ್ಮಾ
ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಪರಿಶೀಲನೆಯಲ್ಲಿತ್ತು ಎಂಬ ವರದಿಗಳು ಸುಳ್ಳು ಎಂದು ಸಿಬಿಐ ಶುಕ್ರವಾರ ಹೇಳಿದೆ.
ಕೇಂದ್ರ ಸರ್ಕಾರದ ರಾತ್ರೋರಾತ್ರಿ ಎಲ್ಲಾ ಜವಾಬ್ದಾರಿಯಿಂದ ಅಲೋಕ್ ವರ್ಮಾ ಅವರನ್ನು ಮುಕ್ತಗೊಳಿಸುವ ಸಂದರ್ಭ ರಫೇಲ್ ಯುದ್ದ ವಿಮಾನ ಒಪ್ಪಂದಕ್ಕೆ ಸಂಬಂಧಿಸಿರುವುದು ಸೇರಿದಂತೆ ಹಲವು ನಿರ್ಣಾಯಕ ಕಡತಗಳು ವರ್ಮಾ ಅವರ ಪರಿಶೀಲನೆಯಲ್ಲಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಅವರು, ಇದು ಸ್ಥಾಪಿತ ಹಿತಾಸಕ್ತಿಗಳು ಸೃಷ್ಟಿಸಿದ ಸುಳ್ಳಾಗಿದೆ. ಸಿಬಿಐಯಲ್ಲಿರುವ ಪ್ರತಿ ಹಂತದ ಕಡತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕೆಲವು ಪತ್ರಿಕೆಗಳಲ್ಲಿ ವರದಿಯಾದ ಸುದ್ದಿ ಸಿಬಿಐಯ ವಿಶ್ವಾಸಾರ್ಹತೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಸಿಬಿಐ ಅಂತರಾಷ್ಟ್ರೀಯವಾಗಿ ಪ್ರಕರಣಗಳ ತನಿಖೆ ನಡೆಸುತ್ತದೆ. ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡಬಾರದು ಎಂದು ತಿಳಿಸಿದ್ದಾರೆ.
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ದಳದ ಪ್ರತಿಷ್ಠೆಗೆ ಕುಂದುಂಟಾಗುವಂತೆ ವರ್ತಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಹಾಗೂ ಉಪಮುಖ್ಯಸ್ಥ ರಾಕೇಶ್ ಅಸ್ಥಾನಾ ಅವರ ಅಧಿಕಾರಕ್ಕೆ ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕತ್ತರಿ ಪ್ರಯೋಗ ಮಾಡಿತ್ತು.
ಬಹಿರಂಗವಾಗಿ ಕಿತ್ತಾಡುವ ಮೂಲಕ ಸಿಬಿಐನ ಮರ್ಯಾದೆಯನ್ನು ಹರಾಜು ಹಾಕಿದ್ದ ಇಬ್ಬರೂ ಉನ್ನತಾಧಿಕಾರಿಗಳನ್ನು ಮಂಗಳವಾರ ತಡರಾತ್ರಿ ರಜೆ ಮೇಲೆ ಕಳುಹಿಸಿತ್ತು. ಬಳಿಕ ಸಿಬಿಐನ ಜಂಟಿ ನಿರ್ದೇಶಕರಾಗಿರುವ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿ ಎಂ.ನಾಗೇಶ್ವರ ರಾವ್ ಅವರಿಗೆ ಸಿಬಿಐನ ಹೊಣೆಗಾರಿಕೆಯನ್ನು ಹಂಗಾಮಿಯಾಗಿ ವಹಿಸಿತ್ತು.
ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದ ಸಿಬಿಐನ ಮುಖ್ಯಸ್ಥ ಹಾಗೂ ಉಪ ಮುಖ್ಯಸ್ಥರನ್ನು ರಾತ್ರೋರಾತ್ರಿ ರಜೆ ಮೇಲೆ ಕಳಿಹಿಸಿದ ಕೇಂದ್ರ ಸರ್ಕಾರದ ಕ್ರಮ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ವಿಚಾರವನ್ನು ಕೈಗೆತ್ತಿಕೊಂಡಿರುವ ಕಾಂಗ್ರೆಸ್, ಸಿಬಿಐ ಮುಖ್ಯಸ್ಥರ ವಿರುದ್ಧ ಕೇಂದ್ರ ಸರ್ಕಾರ ನಡೆಸಿದ ರಾತ್ರಿ ಆಪರೇಷನ್ ಅನ್ನು ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಜೊತೆಗೆ ತಳಕು ಹಾಕಲು ಯತ್ನ ನಡೆಸಿದೆ.