ದೇಶ

ಅಮಿತ್ ಶಾ ಶಬರಿಮಲೆ ಹೇಳಿಕೆ ಪ್ರಚೋದನಕಾರಿ , ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಲಿ - ಮಾಯಾವತಿ

Nagaraja AB

ಲಖನೌ: ಶಬರಿಮಲೆ ವಿವಾದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಪ್ರಚೋದನಕಾರಿ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದು, ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಆಗ್ರಹಿಸಿದ್ದಾರೆ.

 ಆಡಳಿತಾರೂಢ ಪಕ್ಷದ   ಅಧ್ಯಕ್ಷ ಅಮಿತ್ ಶಾ ಹೇಳಿಕೆ ಖಂಡನಾರ್ಹವಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ ಎಂಬುದನ್ನು  ತೋರಿಸುತ್ತದೆ. ಸರ್ಕಾರದ ಪ್ರತಿಷ್ಠೆ ಹಾಗೂ ತಪ್ಪು ಕಲ್ಪನೆಗಳಿಂದಾಗಿ ಸಿಬಿಐ, ಸಿವಿಸಿ, ಇಡಿ, ಆರ್ ಬಿಐ ನಂತಹ ಸ್ವಾಯತ್ತ ಸಂಸ್ಥೆಗಳು ಬಿಕ್ಕಟ್ಟು ಎದುರಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶ, ಛತ್ತೀಸ್ ಗಡ,  ರಾಜಸ್ತಾನ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ  ಗಂಭೀರ ವಿಷಯವಾಗಿ ಶಬರಿಮಲೆ ದೇವಸ್ಥಾನ ವಿಚಾರದಲ್ಲಿ ಬಿಜೆಪಿ ನಾಯಕರು ಪ್ರಚೋದನಕಾರಿಯಾದಂತಹ  ಅಸಂವಿಧಾನಿಕ, ಅಸಂಸದೀಯ ಹೇಳಿಕೆ ನೀಡಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕಲ್ಪಿಸುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬಿಜೆಪಿಗೆ ಅಸಮಾಧಾನವಿದ್ದರೆ  ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಿ, ಆದರೆ, ಅವ್ಯವಸ್ಥೆ ಸೃಷ್ಟಿ ಅಥವಾ ಚುನಾಯಿತ ಸರ್ಕಾರವನ್ನು ಕಿತ್ತೊಗೆಯುವ ಬೆದರಿಕೆಯಂತಹ ಕೆಲಸಕ್ಕೆ ಮುಂದಾಗಬಾರೆಂದು ಅವರು ಹೇಳಿದ್ದು, ಧಾರ್ಮಿಕ ವಿಚಾರದಲ್ಲಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

SCROLL FOR NEXT