ದೆಹಲಿ: ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ?
ನವದೆಹಲಿ: ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದ್ದು, ವಾಯುಗುಣಮಟ್ಟ ಕುಸಿಯುತ್ತಿದೆ.
ರಾಷ್ಟ್ರರಾಜಧಾನಿಯಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಭುರೆ ಲಾಲ್ ಮಾತನಾಡಿದ್ದು, ದೆಹಲಿಯ ವಾಯುಗುಣಮಟ್ಟ ಹೀಗೇ ಕುಸಿಯುತ್ತಿದ್ದರೆ ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ವಾಯುಗುಣಮಟ್ಟ ಸುಧಾರಣೆಯಾಗುವ ವಿಶ್ವಾಸವಿದೆ. ಒಂದು ವೇಳೆ ಗುಣಮಟ್ಟದ ಕುಸಿತ ಮುಂದುವರೆದರೆ ದೆಹಲಿಯಲ್ಲಿ ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಕೇವಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ, ನ.01 ರಿಂದ ಹೊಸ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಭುರೆ ಲಾಲ್ ಮಾಹಿತಿ ನೀಡಿದ್ದಾರೆ.
ವಾಯುಗುಣಮಟ್ಟ ಸೂಚ್ಯಂಕ 0-50 ರ ವರೆಗಿದ್ದರೆ ಉತ್ತಮ, 51-100 ಇದ್ದರೆ ತೃಪ್ತಿದಾಯಕ 101-200 ಇದ್ದರೆ ಮಧ್ಯಮ 201-300 ವರೆಗಿದ್ದರೆ ಕಳಪೆ, 301-400 ಮಟ್ಟದಲ್ಲಿದ್ದರೆ ತೀರಾ ಕಳಪೆ ಹಾಗೂ 401-500 ವರೆಗಿದ್ದರೆ ತೀವ್ರವಾಗಿ ಕುಸಿದಿದೆ ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿ ಈಗ ವಾಯುಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.