ವಾಟ್ಸ್ ಆಪ್ ನಲ್ಲಿ ಪ್ರಚೋದನಕಾರಿ ಮೆಸೇಜ್ ಕಳಿಸುವವರಿಗೆ ಮುಂದಿದೆ ಮಾರಿ ಹಬ್ಬ!
ವಾಟ್ಸ್ ಆಪ್ ನಲ್ಲಿ ಎಗ್ಗಿಲ್ಲದೇ ಹರಡುತ್ತಿದ್ದ ಪ್ರಚೋದನಕಾರಿ ಮೆಸೇಜ್ ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡಿದ್ದ ವಿಷಯ. ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರ ಇದಕ್ಕೆ ಕಡಿವಾಣ ಹಾಕುವಂತೆ ವಾಟ್ಸ್ ಆಪ್ ಗೂ ಸೂಚಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪ್ರಚೋದನಕಾರಿ ಮೆಸೇಜ್ ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾದಂತಿದೆ.
"ಪ್ರಚೋದನಕಾರಿ, ಹಿಂಸಚಾರಕ್ಕೆ ಉತ್ತೇಜನ ನೀಡುವಂತಹ ಮೆಸೇಜ್ ಹರಡುತ್ತಿರುವವರ ಲೊಕೇಶನ್ ಹಾಗೂ ಗುರುತಿನ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಿ" ಎಂದು ಕೇಂದ್ರ ಸರ್ಕಾರ ವಾಟ್ಸ್ ಆಪ್ ನ್ನು ಕೇಳಿದೆ. ವಾಟ್ಸ್ ಆಪ್ ಅಧ್ಯಕ್ಷ ಕ್ರಿಸ್ ಡೇನಿಯಲ್ಸ್ ಜೊತೆ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಸಭೆ ನಡೆಸಿದ್ದು, "ಪ್ರಚೋದನಕಾರಿ, ಹಿಂಸಚಾರಕ್ಕೆ ಉತ್ತೇಜನ ನೀಡುವಂತಹ ಮೆಸೇಜ್ ಹರಡುತ್ತಿರುವವರ ವಿವರಗಳನ್ನು ಕೇಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಕೆಂದ್ರ ಸರ್ಕಾರದ ಸೂಚನೆಗೆ ಸ್ಪಂದಿಸುವುದಾಗಿ ವಾಟ್ಸ್ ಆಪ್ ಭರವಸೆ ನೀಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.