ತೆಲಂಗಾಣ ರೈತರಿಗೆ ಕೆಸಿಆರ್ ಬಂಪರ್ ಗಿಫ್ಟ್: ಅವಧಿಪೂರ್ವ ಚುನಾವಣೆಯ ಮುನ್ಸೂಚನೆ!
ಹೈದರಾಬಾದ್: ತೆಲಂಗಾಣದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೂ ಮುನ್ನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ನಡೆಸಿದ ಸಚಿವ ಸಂಪುಟ ಸಭೆ ಅವಧಿ ಪೂರ್ವ ಚುನಾವಣೆ ಊಹಾಪೋಹಕ್ಕೆ ಕಾರಣವಾಗಿತ್ತು.
ಈ ಬೆನ್ನಲ್ಲೇ ಕೆಸಿಆರ್ ರೈತರಿಗೆ ಬಂಪರ್ ಗಿಫ್ಟ್ ಗಳನ್ನು ನೀಡಿದ್ದು ರೈತರ ಖಾತೆಗೆ ನೇರವಾಗಿ ನಗದನ್ನು ವರ್ಗವಾಣೆ ಮಾಡುವ ರೈತು ಬಂಧು ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಪ್ರತಿ ರೈತನಿಗೆ ಪ್ರತಿ ಎಕರೆಗೆ 4000 ರೂಪಾಯಿ ಸಿಗಲಿದ್ದು, ರಾಬಿ ಸೀಸನ್ ಗೂ ಮುನ್ನ ರಾಜ್ಯ ಸರ್ಕಾರ ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. 12,000 ಕೋಟಿ ರೂಪಾಯಿ ಅನುದಾನದ ಪೈಕಿ ಅರ್ಧದಷ್ಟು ಹಣ ಅಂದರೆ 6000 ಕೋಟಿ ರೂಪಾಯಿಯಷ್ಟು ಹಣ ಈಗಾಗಲೇ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.
ಇದೇ ವೇಳೆ ಕೆಸಿಆರ್ ರೈತರಿಗಾಗಿ ವಿಮಾ ಯೋಜನೆಯನ್ನೂ ಘೋಷಿಸಿದ್ದು, ಇಂದು 2 ಲಕ್ಷದವರೆಗಿನ ಸಾಲ ಮನ್ನ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 2014 ರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಪ್ರಕಾರ ಈಗಾಗಲೇ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಿದ್ದಾರೆ.
ಕೆಸಿಆರ್ ರೈತರ ಪರವಾದ, ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಿರುವುದು ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿ ವರ್ಷಾಂತ್ಯಕ್ಕೆ ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ಹೂಡುತ್ತಿರುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.