ದೇಶ

2007 ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣ: ಅನಿಕ್, ಇಸ್ಮಾಯಿಲ್ ತಪ್ಪಿತಸ್ಥರು

Manjula VN
ಹೈದರಾಬಾದ್: 2007ರಲ್ಲಿ ಹೈದರಾಬಾದ್ ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅನಿಕ್ ಹಾಗೂ ಇಸ್ಲಾಯಿಲ್ ಇಬ್ಬರನ್ನು ತಪ್ಪಿತಸ್ಥರೆಂದು ನಾಂಪಲ್ಲಿ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ. 
2007ರಲ್ಲಿ ಹೈದರಾಬಾದ್ ನಲ್ಲಿ ಅವಳಿ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 44 ಮಂದಿ ಸಾವನ್ನಪ್ಪಿ, ಹಲವರು  ಗಂಭೀರವಾಗಿ ಗಾಯಗೊಂಡಿದ್ದರು. 
ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಹಾಗೂ ಅನೀಕ್ ಶಫೀಖ್ ಸಯೀದ್ ನನ್ನು ತಪ್ಪಿತಸ್ಥರೆಂದು ತಿಳಿಸಿದ್ದು, ಫರೂಖ್ ಶರ್ಫುದ್ದೀನ್ ತರ್ಕಾಶ್, ಮೊಹಮ್ಮದ್ ಸಾದಿಕ್ ಇಸ್ರಾರ್ ಅಹ್ಮದ್ ಶೇಕ್ ಮತ್ತು ತರಿಕ್ ಅಂಜುಮ್ ಎಂಬುವವರನ್ನು ಖುಲಾಸೆಗೊಳಿಸಿದೆ. 
ಪ್ರಕರಣ ಸಂಬಂಧ ಆಗಸ್ಟ್ 27 ರಂದು ನ್ಯಾಯಾಲಯ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಭದ್ರತಾ ಕಾರಣಗಳಿಂದ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿರಲಿಲ್ಲ. ಹೀಗಾಗಿ ಸೆಪ್ಟೆಂಬರ್ 4 ರಂದು ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. 
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ತೆಲಂಗಾಣ ಪೊಲೀಸರು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಬಳಿಕ ಐವರೂ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಾದ ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಲ್ ತಲೆ ಮರೆಸಿಕೊಂಡಿದ್ದಾರೆಂದು ತಿಳಿಸಿದ್ದರು. 
ಪ್ರಕರಣದಲ್ಲಿ ಇದೀಗ ತಪ್ಪಿತಸ್ಥನಾಗಿರುವ ಅನೀಕ್ ಶಫೀಕ್ ಸಯೀದ್, ರಿಯಾಜ್ ಭಟ್ಕಳ್ ಹಾಗೂ ಇಸ್ಮಾಯಿಲ್ ಚೌಧರಿ ಮೂವರು ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿತ್ತು. 
SCROLL FOR NEXT