ದೇಶ

ಪ್ರಬಲ ಸಾಕ್ಷಿಗಳು ದೊರಕಿದ್ದರಿಂದ ಮಾವೋ ಕಾರ್ಯಕರ್ತರ ಬಂಧನ: 'ಸುಪ್ರೀಂ'ಗೆ ಮಹಾರಾಷ್ಟ್ರ ಪೊಲೀಸ್ ಪ್ರತಿಕ್ರಿಯೆ

Sumana Upadhyaya

ನವದೆಹಲಿ: ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧಿಸಿದ್ದ ಐವರು ಕಾರ್ಯಕರ್ತರು ಮಾವೋವಾದಿಗಳ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ನಿಷೇಧಿತ ಸಿಪಿಐ ಮಾವೋವಾದಿಗಳ ಜೊತೆ ಅವರು ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಇದ್ದ ಹಿನ್ನಲೆಯಲ್ಲಿ ಬಂಧಿಸಲಾಗಿತ್ತು ಎಂದು ಮಹಾರಾಷ್ಟ್ರ ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿದ್ದಾರೆ.

ನ್ಯಾಯಾಲಯದಲ್ಲಿ ಉತ್ತರ ಅಫಿಡವಿಟ್ಟು ಸಲ್ಲಿಸಿದ ಮಹಾರಾಷ್ಟ್ರ ಸರ್ಕಾರ, ಈ ಐವರು ಹಿಂಸಾಕೃತ್ಯಕ್ಕೆ ಯೋಜನೆ ರೂಪಿಸಿ ತಯಾರಿ ನಡೆಸಿದ್ದು ಮಾತ್ರವಲ್ಲದೆ ಅತಿದೊಡ್ಡ ಮಟ್ಟದಲ್ಲಿ ಹಿಂಸಾಚಾರ ಸೃಷ್ಟಿಸಲು ಯೋಜನೆ ನಡೆಸುತ್ತಿದ್ದರು. ಈ ಮೂಲಕ ಸಮಾಜದ ಆಸ್ತಿಪಾಸ್ತಿಗಳನ್ನು ನಾಶಮಾಡಿ ಶಾಂತಿ ಕೆಡಿಸಲು ನೋಡುತ್ತಿದ್ದರು ಎಂದಿದ್ದಾರೆ.

ಪುಣೆಯ ಪೊಲೀಸ್ ಆಯುಕ್ತರು ಸುಪ್ರೀಂ ಕೋರ್ಟ್ ಗೆ ಈ ವಿವರ ನೀಡಿ ಅಫಿಡವಿಟ್ಟು ಸಲ್ಲಿಸಿದ್ದು ಈ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಎಫ್ಐಆರ್ ನಿಂದ ಇವರು ಮಾಡಿರುವ ತೀವ್ರ ಅಪರಾಧಗಳ ಗಂಭೀರತೆಯನ್ನು ನೋಡಬಹುದಾಗಿದೆ ಎಂದಿದ್ದಾರೆ.
ಈ ಕಾರ್ಯಕರ್ತರು ಹಿಂಸೆ ನಡೆಸಲು, ಶತ್ರುಗಳ ವಿರುದ್ಧ ಯೋಜಿತ ಹೊಂಚುದಾಳಿಯನ್ನು / ದಂಗೆಯನ್ನು ನಡೆಸಲು ಯೋಜಿಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಈ ಐವರು ಕಾರ್ಯಕರ್ತರಿಗೆ ಗೃಹ ಬಂಧನದ ಆದೇಶವನ್ನು ಕಳೆದ ಆಗಸ್ಟ್ 29ರಿಂದ ನಾಳೆಯವರೆಗೆ ನೀಡಿದ್ದ ಸುಪ್ರೀಂ ಕೋರ್ಟ್ ಭಿನ್ನಮತ ಪ್ರಜಾಪ್ರಭುತ್ವದ ಸುರಕ್ಷಾ ಕವಚವಾಗಿದೆ ಎಂದು ಹೇಳಿದ್ದರು.

ಮಹಾರಾಷ್ಟ್ರ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದನ್ನು ವಿರೋಧಿಸಿ ಇತಿಹಾಸತಜ್ಞ ರೊಮಿಲಾ ತಾಪರ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.

ದೇಶದ ಹಲವು ರಾಜ್ಯಗಳಲ್ಲಿ ಮಹಾರಾಷ್ಟ್ರ ಪೊಲೀಸರು ಕಳೆದ ತಿಂಗಳು 28ರಂದು ಎಡಪಂಥೀಯ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿ ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ್ದ ಸಂಶಯದ ಮೇಲೆ ಐವರನ್ನು ಬಂಧಿಸಿದ್ದರು. ಅವರು ತೆಲುಗು ಕವಿ ವರವರ ರಾವ್, ವೆರ್ನೊನ್ ಗೊಂಜಲ್ವೆಸ್, ಅರುಣ್ ಫರ್ರೈರಾ, ಸುಧಾ ಭಾರದ್ವಾಜ್ ಮತ್ತು ಗೌತಮ್ ನವಲಖರು ಆಗಿದ್ದಾರೆ.

ಸುಪ್ರೀಂ ಕೋರ್ಟ್ ಅವರನ್ನು ನಾಳೆಯವರೆಗೆ ಗೃಹಬಂಧನದಲ್ಲಿರಿಸಿದ್ದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ನಾಳೆ ಅರ್ಜಿ ವಿಚಾರಣೆ ನಡೆಸಲಿದೆ.

SCROLL FOR NEXT