ದೇಶ

ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು: ಐಪಿಸಿ ಸೆಕ್ಷನ್ 377 ರದ್ದು ಗೊಳಿಸಿ ಸುಪ್ರೀಂ ಕೋರ್ಟ್ ಹೇಳಿಕೆ

Srinivasamurthy VN
ನವದೆಹಲಿ: ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು ಎಂದು ಹೇಳುವ ಮೂಲಕ ಸಲಿಂಗ ಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸಲಿಂಗ ಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ತನ್ನ ಅಂತಿಮ ತೀರ್ವು ನೀಡಿದ ಸುಪ್ರೀಂ ಕೋರ್ಟ್, ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು. ಇಷ್ಟು ದಿನ ಅವರ ಹಕ್ಕನ್ನು ಕಸಿಯಲಾಗಿತ್ತು. ಲೈಂಗಿಕ ದೃಷ್ಟಿಕೋನ ವೈಯುಕ್ತಿಕ ನೈಸರ್ಗಿಕ ಹಕ್ಕಾಗಿದ್ದು, ಅದರ ನಿರ್ಬಂಧ ಅಥವಾ ತಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದಂತೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸುವ ಕುರಿತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ ಅಪರಾಧವಲ್ಲ ಎಂಬ ತನ್ನ ಅವಿರೋಧ ತೀರ್ಪು ನೀಡಿತು. 
ಈ ವೇಳೆ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇತಿಹಾಸ ಸಲಿಂಗಿಗಳ ಕ್ಷಮೆ ಕೋರಬೇಕು. ಇಷ್ಟು ದಿನ ಅವರ ಹಕ್ಕನ್ನು ಕಸಿಯಲಾಗಿತ್ತು. ಲೈಂಗಿಕ ದೃಷ್ಟಿಕೋನ ವೈಯುಕ್ತಿಕ ನೈಸರ್ಗಿಕ ಹಕ್ಕಾಗಿದ್ದು, ಅದರ ನಿರ್ಬಂಧ ಅಥವಾ ತಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದಂತೆ. ದೇಶದ ನಾಗರಿಕನಿಗಿರುವ ಪ್ರತೀಯೊಂದು ಹಕ್ಕು ಕೂಡ ಸಲಿಂಗಗಳಿಗಿದೆ. ಪರಸ್ಪರರ ಹಕ್ಕುಗಳನ್ನು ನಾವು ಗೌರವಿಸಬೇಕು. ಸಲಿಂಗಕಾಮ ಅಪರಾಧ ಎಂಬ ಚರ್ಚೆಯೇ ತರ್ಕಕ್ಕೆ ವಿರುದ್ಧವಾದುದಾಗಿದ್ದು, ಸಲಿಂಗಕಾಮನ್ನು ಅಪರಾಧ ಎನ್ನುವ ಐಪಿಸಿ ಸೆಕ್ಷೆನ್ 377 ಸಂವಿಧಾನದ ಕಲಂ 14 (ಧರ್ಮ, ಜಾತಿ, ಲಿಂಗ, ಪ್ರದೇಶದ ಹೆಸರಲ್ಲಿ ದೌರ್ಜನ್ಯ ನಡೆಸುವುದರ ವಿರುದ್ಧ ಹೋರಾಡುವ ಹಕ್ಕು)ರ ಉಲ್ಲಂಘನೆಯಾಗುತ್ತದೆ. ಸಾಂವಿಧಾನಿಕ ನಿಬಂಧನೆಗಳನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಇದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಐಪಿಸಿ ಸೆಕ್ಷನ್ 377 ಅನ್ವಯ ಸಲಿಂಗಕಾಮ ಅಪರಾಧವಾಗಿದ್ದು, ಈ ಕಾನೂನಿನ ಅನ್ವಯ ಸಲಿಂಗಕಾಮದ ಕುರಿತ ಸಹಾನುಭೂತಿ ಕೂಡ ಅಪರಾಧ ಎಂದಾಗಿತ್ತು. ಆದರೆ ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಅವಿರೋಧವಾಗಿ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ್ದು, ಆ ಮೂಲಕ 156 ವರ್ಷಗಳ ಹಳೆಯ ಕಾನೂನು ರದ್ದಾದಂತಾಗಿದೆ.
SCROLL FOR NEXT