ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ದೊಡ್ಡ ಬಫೂನ್(ಜೋಕರ್) ಎಂದು ಕರೆದಿದ್ದ ತೆಲಂಗಾಣ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಈಗ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ.
ಕೆಸಿಆರ್ ಅವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು, ತೆಲಂಗಾಣ ಹಂಗಾಮಿ ಸಿಎಂಗೆ ಕನಿಷ್ಠ ಕೃತಜ್ಞತೆಯೂ ಇಲ್ಲ. ಅವರು ಬಳಸಿದ ಪದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಕಾರಣರಾದ ಕಾಂಗ್ರೆಸ್ ನಾಯಕತ್ವಕ್ಕೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೆಸಿಆರ್ ಅವರು ಧನ್ಯವಾದ ಹೇಳಬೇಕು. ಅವರು ತಾವು ಗೆಲ್ಲುತ್ತೇವೆ ಎಂದು ಭಾವಿಸಿದ್ದಾರೆ. ಆದರೆ ರಾಜ್ಯದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು, ಜನರಿಗೆ ದ್ರೋಹ ಮಾಡಿದ ಕೆಸಿಆರ್ ಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇನ್ನು ಎನ್ ಸಿಪಿ ನಾಯಕ ತಾರಿಖ್ ಅನ್ವರ್ ಅವರು ಸಹ ಕೆಸಿಆರ್ ಹೇಳಿಕೆಯನ್ನು ಖಂಡಿಸಿದ್ದು, ಅವರ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕೆಸಿಆರ್ ಬಳಸಿದ ಭಾಷೆ ಒಪ್ಪಿಕೊಳ್ಳುವಂತದಲ್ಲ. ಸಾರ್ವಜನಿಕ ಜೀವನದಲ್ಲಿರುವವರು ಇಂತಹ ಭಾಷೆ ಬಳಸಬಾರದು ಎಂದು ಸಿಪಿಐ ಮುಖಂಡ ಡಿ ರಾಜಾ ಅವರು ಹೇಳಿದ್ದಾರೆ.
ನಿನ್ನೆ ತೆಲಂಗಾಣ ವಿಧಾನಸಭೆ ವಿಸರ್ಜಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಕೆಸಿಆರ್, ರಾಹುಲ್ ಗಾಂಧಿ ಏನೆಂಬುದು ಎಲ್ಲರಿಗೂ ಗೊತ್ತು, ರಾಹುಲ್ ಗಾಂಧಿ ದೇಶದ ದೊಡ್ಡ ಬಫೂನ್. ಆತ ಸಂಸತ್ ನಲ್ಲಿ ಪ್ರಧಾನಿಯನ್ನು ಆಲಿಂಗನ ಮಾಡಿ, ಕಣ್ಣು ಹೊಡೆದಿದ್ದನ್ನು ಎಲ್ಲರೂ ಗಮನಿಸಿದ್ದಾರೆ ಎಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos