ದೇಶ

'ನಮ್ಮದೇ ಸುಪ್ರೀಂ ಕೋರ್ಟ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ ತೀರುತ್ತೇವೆ'

Srinivasamurthy VN
ಲಖನೌ: ಸುಪ್ರೀಂ ಕೋರ್ಟ್ ನಮ್ಮದೇ ಆಗಿದ್ದು, ರಾಮ ಮಂದಿರ ತೀರ್ಪು ಕೂಡ ನಮ್ಮ ಪರವಾಗಿಯೇ ಇರಲಿದೆ. ಹೀಗಾಗಿ ನಾವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶತಃಸಿದ್ಧ ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಸಚಿವ ಮುಕುಟ್ ಬಿಹಾರಿ ವರ್ಮಾ ಅವರನ್ನು ಪತ್ರಕರ್ತರು ಮಾತನಾಡಿಸಿದ್ದು, ಈ ವೇಳೆ ರಾಮಮಂದಿರ ತೀರ್ಪಿನ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಭರದಲ್ಲಿ ಸಚಿವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ನಮ್ಮದೇ. ಹೀಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶತಃಸಿದ್ಧ. ರಾಮ ಮಂದಿರ ನಿರ್ಮಾಣಕ್ಕೆ ನಾವು ಸಂಕಲ್ಪ ತೊಟ್ಟಿದ್ದೇವೆ. ಅದಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
'ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ ನಿಜ. ಆದರೆ.. ಸುಪ್ರೀಂ ಕೋರ್ಟ್ ನಮ್ಮದೆ. ಅಲ್ಲಿ ನ್ಯಾಯದಾನಿಗಳೂ ನಮ್ಮವರೆ. ವಿಧಾನಸಭೆ ಕೂಡ ನಮ್ಮದೆ. ಈ ದೇಶ ಕೂಡ ನಮ್ಮದೇ. ಮಂದಿರ ಕೂಡ ನಮ್ಮದೇ. ಹೀಗಾಗಿ ರಾಮಮಂದಿರ ನಿರ್ಮಾಣವಾಗಿಯೇ ತೀರುತ್ತದೆ ಎಂದು ಹೇಳಿದ್ದಾರೆ. 
ಸಚಿವ ವರ್ಮಾ ಉತ್ತರ ಪ್ರದೇಶದ ಬಹ್ರೇಚ್ ವಿಧಾನಸಭೆಯ ಶಾಸಕರಾಗಿದ್ದು, ಸತತ ನಾಲ್ಕು ಬಾರಿ ಗೆದ್ದು, ಇದೀಗ ಸಿಎಂ ಯೋಗಿ ಆದಿತ್ಯಾನಾಥ್ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದಾರೆ. 
ಇನ್ನು ವರ್ಮಾ ಅವರ ಹೇಳಿಕೆಯನ್ನು ವಿರೋಧಿಸಿರುವ ಪ್ರತಿಪಕ್ಷಗಳು, ವರ್ಮಾ ಆಯೋಧ್ಯೆ ವಿವಾದವನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿವೆ.
SCROLL FOR NEXT