ದೇಶ

ಹರ್ಯಾಣ: ಸಿಬಿಎಸ್ ಇ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಯುವತಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ!

Srinivasamurthy VN
ಮಹೇಂದ್ರಗಢ: 2018ನೇ ಸಾಲಿನ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಅಗ್ರ ಸ್ಥಾನ ಪಡೆದಿದ್ದ ಹರ್ಯಾಣ ಮೂಲದ ಯುವತಿಯನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದು ಬಸ್ ನಿಲ್ದಾಣದಲ್ಲಿ ಎಸೆದು ಹೋಗಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಸಿಬಿಎಸ್‌ಇ ಪರೀಕ್ಷೆಯಲ್ಲಿ ದೇಶಕ್ಕೇ ಟಾಪರ್ ಆಗಿ, ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರ್ಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಗುರುವಾರ ನಡೆದಿದ್ದು, ಗುರಗಾಂವ್ ನಿಂದ 116 ಕಿಲೋಮೀಟರ್ ದೂರದ ಬಸ್‌ ನಿಲ್ದಾಣವೊಂದರಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಕೂಡಲೇ ಸ್ಥಳೀಯರು ಆಕೆಯನ್ನು ಅಪಚರಿಸಿ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಾಮೂಹಿಕ ಅತ್ಯಾಚಾರ ವಿಚಾರ ಬೆಳಕಿಗೆ ಬಂದಿದೆ.
ಸಂತ್ರಸ್ಥ ಯುವತಿ ಹೇಳಿಕೊಂಡಿರುವಂತೆ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾದ ಈಕೆ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿದ್ದ ಹೊಲಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಪಹರಣಕಾರರು ಮಾತ್ರವಲ್ಲದೇ, ಹೊಲದಲ್ಲಿ ಮೊದಲೇ ಇದ್ದ ಹಲವು ಮಂದಿ ಕೂಡಾ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಿಗಳೆಲ್ಲರೂ ತನ್ನ ಗ್ರಾಮದವರೇ ಎಂದು ಯುವತಿ ದೃಢಪಡಿಸಿದ್ದಾಳೆ.
ಪೊಲೀಸರು ದೂರು ಸ್ವೀಕರಿಸಲು ಮತ್ತು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಯುವತಿಯ ತಂದೆ- ತಾಯಿ ಆಪಾದಿಸಿದ್ದಾರೆ. ಒಂದಲ್ಲ ಒಂದು ಠಾಣೆಯಲ್ಲಿ ದೂರು ಸ್ವೀಕರಿಸಬಹುದು ಎಂಬ ನಿರೀಕ್ಷೆಯಲ್ಲಿ ಅಲೆದಾಡುತ್ತಿದ್ದು, ಪ್ರಕರಣವನ್ನು ಮುಂದುವರಿಸದಂತೆ ಆರೋಪಿಗಳಿಂದ ಬೆದರಿಕೆಯೂ ಇದೆ ಎಂದು ಅವರು ದೂರಿದ್ದಾರೆ.
ಮಹಿಳೆಯ ದೂರಿನ ಮೇರೆಗೆ 'ಝೀರೊ ಎಫ್‌ಐಆರ್' ದಾಖಲಿಸಲಾಗಿದ್ದು, ಮಹೇಂದ್ರಗಢ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಝೀರೊ ಎಫ್‌ಐಆರ್ ಎಂದರೆ ದೂರು ಸ್ವೀಕರಿಸಿದ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದಿಲ್ಲ. ಆದರೆ ಪ್ರಕರಣ ದಾಖಲಿಸಿದ ಬಳಿಕ ಸೂಕ್ತ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ  ಎಂದು ರೇವಾರಿ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. 
SCROLL FOR NEXT