ದೇಶ

ಇಸ್ರೋ ಬೇಹುಗಾರಿಕೆ ಪ್ರಕರಣ: ಸುಪ್ರೀಂ ತೀರ್ಪು ಕುರಿತು ಸಂಪೂರ್ಣ ತಿಳಿಯಬೇಕಿದೆ- ವಿಜ್ಞಾನಿ ನಂಬಿ ನಾರಾಯಣ್

Manjula VN
ನವದೆಹಲಿ: ಇಸ್ರೋ ಬೇಹುಗಾರಿಗೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಕುರಿತು ಸಂಪೂರ್ಣ ಅರಿಯಬೇಕಿದೆ ಎಂದು ವಿಜ್ಞಾನಿ ನಂಬಿ ನಾರಾಯಣ್ ಅವರು ಶುಕ್ರವಾರ ಹೇಳಿದ್ದಾರೆ. 
ತಮ್ಮ ಮೇಲೆ ವ್ಯಥಾ ಆರೋಪ ಮಾಡಿ ಪ್ರಕರಣದಲ್ಲಿ ಸಿಲುಕಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಈ ಹಿಂದೆ ನಂಬಿ ನಾರಾಯಣ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 
ಈ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ವಿಚಾರಣೆ ಬಳಿಕ ಇಂದು ತೀರ್ಪು ಪ್ರಕಟಿಸಿದ್ದು, ವಿಜ್ಞಾನಿ ನಂಬಿ ನಾರಾಯಣ್ ಅವರಿಗೆ ರೂ.50 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದೆ. ಅಲ್ಲದೆ, ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ಅವರ ಬಂಧನ ಅನಗತ್ಯವಾಗಿತ್ತು ಎಂದು ತಿಳಿಸಿದೆ. 
ಸುಪ್ರೀಂಕೋರ್ಟ್ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಂಬಿ ನಾರಾಯಣನ್ ಅವರು, ನ್ಯಾಯಾಲಯದ ತೀರ್ಪು ಕುರಿತು ಮಾಹಿತಿ ಪಡೆದುಕೊಳ್ಳಬೇಕಿದೆ. ರೂ. 50 ಲಕ್ಷ ಪರಿಹಾರ ನೀಡುವಂತೆ ಹಾಗೂ ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಮಾಹಿತಿಯಷ್ಟೇ ಪ್ರಸ್ತುತ ನನಗೆ ತಿಳಿದಿರುವ ಮಾಹಿತಿ ಎಂದು ಹೇಳಿದ್ದಾರೆ. 
1994ರಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧಪಡಿಸುತ್ತಿರುವ ಸಂದರ್ಭದಲ್ಲಿ, ಆ ತಂತ್ರಜ್ಞಾನವನ್ನು ನಂಬಿ ನಾರಾಯಣ್ ಅವರು ಶತ್ರು ರಾಷ್ಟ್ರಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆಂಬ ಆರೋಪಗಳು ಕೇಳಿ ಬಂದಿತ್ತು. 
ಈ ಹಿನ್ನಲೆಯಲ್ಲಿ ಕೇರಳ ಪೊಲೀಸರು ನಂಬಿ ನಾರಾಯಣನ್ ಮತ್ತು ವಿಜ್ಞಾನಿ ಶಶಿಕುಮಾರ್, ಬೆಂಗಳೂರು ಮುಲದ ಉದ್ಯಮಿಗಳಾದ ಎಸ್.ಕೆ.ಶರ್ಮಾ ಮತ್ತು ಚಂದ್ರಶೇಖರ್ ಹೀಗೆ ಒಟ್ಟು ಆರು ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು. 
50 ದಿನಗಳ ಕಾಲ ನಂಬಿ ಅವರು ಜೈಲು ಶಿಕ್ಷೆ ಅನುಭವಿಸಿದ್ದು, ಜೈಲಿನಲ್ಲಿ ಅವರಿಗೆ ವಿಪರೀತ ಚಿತ್ರಹಿಂಸೆ ನೀಡಲಾಗಿತ್ತು. ಈ ವೇಳೆ ಇಸ್ರೋದ ಹಲವಾರು ಯೋಜನೆಗಳೂ ಕೂಡ ನೆನೆಗುದಿಗೆ ಬಿದ್ದಿತ್ತಲ್ಲದೆ, ಇಸ್ರೋ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಗಿತ್ತು. 
SCROLL FOR NEXT