ಸೇನಾ ಮಾಜಿ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್
ನವದೆಹಲಿ: ಪಾಕಿಸ್ತಾನ ಬದಲಾಗಿಲ್ಲ. ಈಗಲೂ ಅಲ್ಲಿನ ಸೇನೆ ದಾಳಿಗೆ ಕರೆ ನೀಡುತ್ತಿದೆ ಎಂದು ಸೇನಾ ಮಾಜಿ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಸೇನೆಯಿಂದ ಪ್ರಚೋದಿತರಾಗಿದ್ದಾರೆ. ಇಮ್ರಾನ್ ಖಾನ ಆಡಳಿತದಿಂದ ಪಾಕಿಸ್ತಾನ ಬದಲಾಗುತ್ತದೆ ಎಂದು ನೀವು ನಿರೀಕ್ಷಿಸುತ್ತಿದ್ದೀರಾ? ಒಬ್ಬ ವ್ಯಕ್ತಿ ಸೇನೆಯಿಂದ ಪ್ರಚೋದನೆಗೊಳಪಟ್ಟರೆ, ಸೇನೆ ಮತ್ತಷ್ಟು ಆಳ್ವಿಕೆ ನಡೆಸುತ್ತದೆ. ಪಾಕಿಸ್ತಾನದ ಸೇನೆ ಈಗಲೂ ದಾಳಿಕೆ ಕರೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರು ಸೇನೆಯ ನಿಯಂತ್ರಣದಲ್ಲಿರುತ್ತಾರೆಯೇ ಅಥವಾ ಮುಂದುವರೆಯುತ್ತಾರೆಂಯೇ ಎಂಬುದನ್ನು ಕಾದು ನೋಡಬೇಕಿದೆ. ಪಾಕಿಸ್ತಾನದಲ್ಲಿನ ಪರಿಸ್ಥಿತಿ ಬದಲಾಗುವ ಕುರಿತಂತೆ ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಉಭಯ ರಾಷ್ಟ್ರಗಳ ನಡುವಿನ ಕಾರ್ತಾರ್ಪುರ ಮಾರ್ಗ ತೆರೆಯುವ ಕುರಿತಂತೆ ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ರೀತಿಯ ಪ್ರಸ್ತಾವನೆಗಳೂ ಬಂದಿಲ್ಲ ಎಂದಿದ್ದಾರೆ.
ಪಾಕಿಸ್ತಾನದಿಂದ ಯಾವುದೇ ಪ್ರಸ್ತಾವನೆಗಳೂ ಬಂದಿಲ್ಲ. ಈ ವಿಚಾರ ಹಲವು ವರ್ಷಗಳ ಹಿಂದಿನದ್ದು. ಒಂದು ವೇಳೆ ಪಾಕಿಸ್ತಾನದಿಂದ ಈ ಸಂಬಂಧ ಪ್ರಸ್ತಾವನೆಗಳು ಬಂದಿದ್ದೇ ಆದರೆ, ಈ ಬಗ್ಗೆ ಚಿಂತನೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ನವಜೋತ್ ಸಿಂಗ್ ಸಿಧು ಅವರು, ಗುರು ನಾನಕ್ ಅವರು 550ನೇ ಜನ್ಮದಿನಾಚರಣೆಯಂದು ಪಾಕಿಸ್ತಾನ ಕಾರ್ತಾರ್ಪುರ ಸಾಹೀತ್ ಮಾರ್ಗವನ್ನು ತೆರೆಯಲಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics