ನವದೆಹಲಿ: ನಿರೀಕ್ಷಿತ ಫಲಾನುಭವಿಗಳ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಲು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ ವೆಬ್ ಸೈಟ್ ಮತ್ತು ಸಹಾಯವಾಣಿಯನ್ನು ಆರಂಭಿಸಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂಬ ಮಹಾತ್ವಾಕಾಂಕ್ಷಿ ವಿಮಾ ಯೋಜನೆಯಡಿ ದೇಶದ 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷಗಳವರೆಗೆ ಆರೋಗ್ಯ ಸೇವೆಗೆ ಹಣ ಒದಗಿಸುವ ಯೋಜನೆಯಾಗಿದ್ದು ಇದೇ ತಿಂಗಳ 23ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರ್ಖಂಡ್ ನಲ್ಲಿ ಚಾಲನೆ ನೀಡಲಿದ್ದಾರೆ.
ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರುಗಳಿದೆಯೇ ಎಂದು ವೆಬ್ ಸೈಟ್ ವಿಳಾಸ mera.pmjay.gov.in ಅಥವಾ ಸಹಾಯವಾಣಿ ಸಂಖ್ಯೆ 14555ಕ್ಕೆ ಕರೆ ಮಾಡಿ ತಿಳಿದುಕೊಳ್ಳಬಹುದು.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ದಾಖಲಾತಿ ಮಾಡಿಕೊಳ್ಳುವುದಾಗಿ ಹಲವು ನಕಲಿ ವೆಬ್ ಸೈಟ್ ಗಳು ಹುಟ್ಟಿಕೊಂಡಿರುವುದರಿಂದ ನಿಜವಾದ ಫಲಾನುಭವಿಗಳಿಗೆ ಈ ವೆಬ್ ಸೈಟ್ ನೆರವಾಗಲಿದೆ.
ತಮ್ಮ ಮೊಬೈಲ್ ಸಂಖ್ಯೆ ನೀಡಿ ಫಲಾನುಭವಿಗಳು ತಮ್ಮ ಹೆಸರು ಇದೆಯೇ ಎಂದು ನೋಡಬಹುದು. ಅದನ್ನು ಒಟಿಪಿ ಸಂಖ್ಯೆಯೊಂದಿಗೆ ಪರಿಶೀಲಿಸಬಹುದು, ನಂತರ ಆನ್ ಲೈನ್ ನಲ್ಲಿ ಕೆವೈಸಿ ಭರ್ತಿ ಮಾಡಬಹುದು.
ಈ ಮಧ್ಯೆ ರೋಗಿಗಳಿಗೆ ಸಹಾಯ ಮಾಡಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಮಿತ್ರರನ್ನು ನೇಮಕ ಮಾಡಲಾಗಿದ್ದು ಪ್ರಾಯೋಗಿಕವಾಗಿ ಆರಂಭಗೊಂಡಿದೆ.