ನವದೆಹಲಿ: ಕರ್ತಾರ್ಪುರ ಗಡಿ ವಿವಾದ ಕುರಿತು ಪಾಕಿಸ್ತಾನ ಜೊತೆಗೆ ಯಾವುದೇ ರೀತಿಯ ಅಧಿಕೃತ ಮಾತುಕತೆಗಳು ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.
ಈ ಕುರಿತಂತೆ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಅವರಿಗೆ ಪತ್ರ ಬರೆದಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಸೆ.13 2018ರಂದು ನಿಮ್ಮ ಪತ್ರ ತಲುಪಿದೆ. ಪವಿತ್ರ ಗುರುದ್ವಾರ ಕರ್ತಾರ್ಪುರ ಸಾಹಿಬ್ ವಿಚಾರ ಕುರಿತಂತೆ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಈದರೆ, ಈ ವರೆಗೂ ಈ ಬಗ್ಗೆ ಪಾಕಿಸ್ತಾನದ ಜೊತೆಗೆ ಯಾವುದೇ ರೀತಿಯ ಅಧಿಕೃತ ಮಾತುಕತೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಹಲವು ವರ್ಷಗಳಿಂದಲೂ ಪಾಕಿಸ್ತಾನ ಸರ್ಕಾರ ಕೇವಲ ನಿಯಂತ್ರಿತ ಸಂಖ್ಯೆಯಲ್ಲಿ ಮಾತ್ರವೇ ಭಾರತೀಯ ಯಾತ್ರಿಕರನ್ನು ಗುರುದ್ವಾರಕ್ಕೆ ತೆರಳಲು ಅವಕಾಶ ನೀಡುತ್ತಿತ್ತು. ಈ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸಲಿದೆ ಎಂದು ಸುಷ್ಮಾ ಸ್ವರಾಜ್ ಅವರು ಪತ್ರದಲ್ಲಿ ಹೇಳಿದ್ದಾರೆ.