ನವದೆಹಲಿ: ರಾಫೆಲ್ ಹಗರಣವನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರವನ್ನು ಹಣಿಯಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಈ ಸಂಬಂಧ ಮಹಾಲೇಖಪಾಲರಿಗೆ ದೂರು ನೀಡಲು ಸಜ್ಜಾಗಿದೆ.
ರಾಫೆಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್, ಇದೀಗ ತನ್ನ ಹೋರಾಟವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ಅದರಂತೆ ಇದೀಗ ಹಗರಣ ಸಂಬಂಧ ಸಿಎಜಿಗೆ ದೂರು ನೀಡಲು ನಿರ್ಧರಿಸಿದೆ. ಇಂದು ಕಾಂಗ್ರೆಸ್ ನಿಯೋಗ ಮಹಾಲೇಖಪಾಲರನ್ನು ಭೇಟಿ ಮಾಡಿ ಈ ಸಂಬಂಧ ಅರ್ಜಿಯೊಂದನ್ನು ಸಲ್ಲಿಕೆ ಮಾಡಲಿದೆ.
ಮೋದಿ ಸರ್ಕಾರವನ್ನು ಹಣಿಯಲು ಕಾಂಗ್ರೆಸ್ಗೆ ಈಗ ಎರಡು ಪ್ರಮುಖ ಅಸ್ತ್ರಗಳು ದೊರಕಿವೆ. ಒಂದು ರಫೇಲ್ ಯುದ್ಧ ವಿಮಾನ ಒಪ್ಪಂದ, ಇನ್ನೊಂದು ವಿಜಯ್ ಮಲ್ಯ ಪಾಲಾಯನ. ರಫೇಲ್ ಯುದ್ಧ ವಿಮಾನದಲ್ಲಿ ಮಹಾ ಗೋಲ್ಮಾಲ್ ನಡೆದಿದೆ ಅಂತ ಆರೋಪಿಸುತ್ತ ಬಂದಿರುವ ಕಾಂಗ್ರೆಸ್, ತನಿಖೆ ನಡೆಸುವಂತೆ ಮಹಾಲೇಖಪಾಲರಿಗೆ(CAG) ಮನವಿ ಸಲ್ಲಿಸಲು ಸಜ್ಜಾಗಿದೆ. ಇಂದು ಮಹಾಲೇಖಪಾಲರನ್ನು ಭೇಟಿಯಾಗಲಿರುವ ಕಾಂಗ್ರೆಸ್ ನಾಯಕರ ನಿಯೋಗ, ಸಮಗ್ರ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಿದೆ.
ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಹಾಗೂ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಮಹಾಲೇಖಪಾಲರನ್ನು ಭೇಟಿ ಮಾಡಲಿದ್ದು, ಇವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಾಥ್ ನೀಡಲಿದ್ದಾರೆ.
ಇನ್ನು ಸದ್ಯ ರಾಫೇಲ್ ಒಪ್ಪಂದದ ಮೌಲ್ಯ, ಯುಪಿಎ ಅವಧಿಯಲ್ಲಾದ ಒಪ್ಪಂದಕ್ಕಿಂತ ಕಡಿಮೆಯೇ ಆಗಿದ್ದಲ್ಲಿ ಮೋದಿ ಸರ್ಕಾರ, ಭಾರತೀಯ ವಾಯುದಳ 126 ಯುದ್ಧ ವಿಮಾನಗಳ ಬೇಡಿಕೆ ಇಟ್ಟಿದ್ದರೂ ಕೇವಲ 36 ವಿಮಾನಗಳ ಖರೀದಿಗೆ ಮುಂದಾಗಿದ್ದೇಕೆ ಅಂತ ಮಾಜಿ ರಕ್ಷಣಾ ಮಂತ್ರಿ ಎ.ಕೆ.ಆ್ಯಂಟನಿ ಪ್ರಶ್ನಿಸಿದ್ದಾರೆ. ಅಲ್ಲದೇ ಈ ಹಗರಣವನ್ನು ಸಂಸದೀಯ ಸಮಿತಿಯ ತನಿಖೆಗೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics