ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರಾಜಕೀಯ ರಣತಂತ್ರ ಬದಲಾಗಿರುವಂತೆ ಕಾಣುತ್ತಿದ್ದು, ಈ ಹಿಂದೆ ಹಿರಿಯರಿಗೆ ಟಿಕೆಟ್ ಇಲ್ಲ ಎಂದು ಘೋಷಣೆ ಮಾಡಿದ್ದ ಬಿಜೆಪಿ ಇದೀಗ ಕಡಿಮೆ ಸ್ಥಾನದ ಭೀತಿಯಿಂದಿ ಹಿರಿಯರಿಗೂ ಟಿಕೆಟ್ ನೀಡಲು ಮುಂದಾಗಿದೆ.
ಇದಕ್ಕೆ ಮೊದಲ ಹೆಜ್ಜೆ ಎಂಬಂತೆ ಬಿಜಿಪಿ ಹಿರಿಯ ಮುಖಂಡ ಹಾಗೂ ಮುತ್ಸದ್ಧಿ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದು, ಗುಜರಾತ್ ನ ಗಾಂಧಿನಗರದಿಂದ ಅಡ್ವಾಣಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಬಿಜೆಪಿ ಆಂತರಿಕ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು. ತಮ್ಮ ಈ ಹಿಂದಿನ ಸ್ವಕ್ಷೇತ್ರ ಗಾಂಧಿನಗರದಿಂದಲೇ ಅಡ್ವಾಣಿ ಅವರನ್ನು ಕಣಕ್ಕಿಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ನಿನ್ನೆ ಗುಜರಾತ್ ಮಾಜಿ ಸಿಎಂ ಶಂಕರ್ ಸಿಂಗ್ ವಘೇಲಾ ಅವರು ಮಾತನಾಡಿದ್ದು, ತಾವು ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಅಡ್ವಾಣಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಾನೂ ಕೂಡ ಬಿಜೆಪಿ ಪಕ್ಷದಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ವಘೇಲಾ ಘೋಷಿಸಿದರು.