ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ವೊಲ್ವೊ ಬಸ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ವಾರಣಾಸಿಯಲ್ಲಿ ನಡೆದಿದೆ.
ವಂದನಾ ರಘುವಂಶಿ ಎಂಬ ಮಹಿಳೆ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ವೊಲ್ವೊ ಬಸ್ ಗೆ ಬೆಂಕಿ ಹಚ್ಚಿದ್ದು, ಬೆಂಕಿ ಬಸ್ ಗೆ ಆವರಿಸುವ ಮುನ್ನ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಗೆ ಬೆಂಕಿ ಹಚ್ಚಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಉತ್ತರ ಪ್ರದೇಶದಿಂದ ಪ್ರತ್ಯೇಕ ಪೂರ್ವಾಂಚಲ ರಾಜ್ಯ ರಚನೆ ಮಾಡಬೇಕು ಎಂದು ವಂದನಾ ರಘುವಂಶಿ ಒತ್ತಾಯಿಸಿದ್ದಾರೆ.
ಇಂದು ಬೆಳಗ್ಗೆ ಕಾಂಟೋನ್ಮೆಂಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಬಸ್ ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಒಂದು ಗಂಟೆಯ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆಗಸ್ಟ್ 15ರಿಂದ ಪ್ರತ್ಯೇಕ ರಾಜ್ಯಕ್ಕಾಗಿ ವಂದನಾ ರಘುವಂಶಿ ಉಪವಾಸ ಮಾಡುತ್ತಿದ್ದು, ಸೋಮವಾರ ಮತ್ತು ಮಂಗಳವಾರ ವಾರಣಾಸಿ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ವಾರಣಾಸಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.