ನವದೆಹಲಿ: ಜೆಟ್ ಏರ್‌ವೇಸ್ ವಿಮಾನ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಯಾಣಿಕರು ಗಂಭೀರ ಸಮಸ್ಯೆ ಎದುರಿಸಿದ್ದ ಹಿನ್ನೆಲೆಯಲ್ಲಿ ಜೆಟ್ ಏರ್ವೇಸ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಮುಂಬೈಯಿಂದ ಜೈಪುರಕ್ಕೆ ಹಾರಾಟ ಆರಂಭಿಸಿದ್ದ ಜೆಟ್ ಏರ್ ವೇಸ್ ನಲ್ಲಿದ್ದ ವಿಮಾನದ ಸಿಬ್ಬಂದಿ ಹಾರಾಟದ ಆರಂಭದಲ್ಲಿ ಕ್ಯಾಬಿನ್ ಒತ್ತಡ ಸಮಸ್ಯೆಯನ್ನು ನಿಯಂತ್ರಿಸದೆ ಇದ್ದ ಕಾರಣ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಒತ್ತಡವನ್ನು ತಡೆಯಲಾಗದೆ ತಲೆನೋವು ಕಾಣಿಸಿಕೊಂಡಿತು, ಮೂಗು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಲು ಆರಂಭವಾಯಿತು.
ಈ ಪರಿಣಾಮ ಐವರು ಪ್ರಯಾಣಿಕರಿಗೆ ತಾತ್ಕಾಲಿಕ ಕಿವುಡುತನ ಆವರಿಸುವ ಅಪಾಯ ಎದುರಾಗಿತ್ತು. ವೈದ್ಯರ ಪ್ರಕಾರ ಈ ಸಮಸ್ಯೆ ಕಡಿಮೆಯಾಗುವುದಕ್ಕೆ ಕನಿಷ್ಟ 10 ದಿನಗಳು ಬೇಕಾಗುತ್ತದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಜೆಟ್ ಏರ್ವೇಸ್ ಸಿಬ್ಬಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.