ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಮೂವರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಆತಂಕಗೊಂಡ ಏಳು ಪೊಲೀಸರು ರಾಜಿನಾಮೆ ನೀಡಿದ್ದಾರೆ ಎಂಬ ವರದಿಯನ್ನು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಕಣಿವೆ ರಾಜ್ಯದಲ್ಲಿ ಯಾವುದೇ ಪೊಲೀಸರು ರಾಜಿನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೆಲವು ವಿಶೇಷ ಪೊಲೀಸ್ ಅಧಿಕಾರಿ(ಎಸ್ ಪಿಒ)ಗಳು ರಾಜಿನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಮಾಧ್ಯಮಗಳ ವರದು ಸುಳ್ಳು ಮತ್ತು ಪ್ರಚೋದಿತ ಎಂದು ರಾಜ್ಯ ಪೊಲೀಸರು ಖಚಿತಪಡಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಬೆಳಗ್ಗೆ ಮೂವರು ಎಸ್ ಪಿಒ ಅಧಿಕಾರಿಗಳು ಸೇರಿದಂತೆ ಒಟ್ಟು 4 ಪೊಲೀಸ್ ಸಿಬ್ಬಂದಿಗಳನ್ನು ಅಹಪರಣ ಮಾಡಿದ್ದ ಉಗ್ರರು, ಈ ಪೈಕಿ ಮೂವರನ್ನು ಕೊಂದು ಹಾಕಿದ್ದರು. ಓರ್ವ ಅಧಿಕಾರಿ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದ. ಮೂವರು ಅಧಿಕಾರಿಗಳನ್ನು ಕೊಂದ ಬಳಿಕ ವಿಡಿಯೋ ಸಂದೇಶ ರವಾನಿಸಿದ್ದ ಉಗ್ರರು ಇನ್ನು ಐದು ದಿನಗಳಲ್ಲಿ ಕೆಲಸಕ್ಕೆ ರಾಜಿನಾಮೆ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದರ ಬೆನ್ನಲ್ಲೇ ಉಗ್ರ ಹಾವಳಿಗೆ ಬೆದರಿರುವ ಪೊಲೀಸ್ ಅಧಿಕಾರಿಗಳು ರಾಜಿನಾಮೆಗೆ ಮುಂದಾಗಿದ್ದಾರೆ. ಶೋಪಿಯಾನ್ ನಲ್ಲಿ ಐದು ಮಂದಿ ಪೊಲೀಸರು ರಾಜಿನಾಮೆ ಘೋಷಣೆ ಮಾಡಿದ್ದು, ಈ ಪೈಕಿ ಮೂವರು ಪೊಲೀಸ್ ಪೇದೆಗಳು ಮತ್ತು ಇಬ್ಬರು ಎಸ್ ಪಿಒ ಅಧಿಕಾರಿಗಳು ರಾಜಿನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದರು.