ದೇಶ

ರಾಫೆಲ್ ಡೀಲ್ ಗಾಗಿ ರಿಲಯನ್ಸ್ ಆಯ್ಕೆ ಮಾಡಿದ್ದು ನಾವೇ: ಡಸ್ಸಾಲ್ಟ್ ಏವಿಯೇಷನ್

Srinivasamurthy VN
ಪ್ಯಾರಿಸ್: ತೀವ್ರ ವಿವಾದಕ್ಕೆ ಕಾರಣವಾಗಿರುವ ರಾಫೆಲ್ ಯುದ್ದ ವಿಮಾನ ಒಪ್ಪಂದದ ಕುರಿತು ಭುಗಿಲೆದ್ದಿರುವ ವಿವಾದಕ್ಕೆ ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ರಾಫೆಲ್ ಯುದ್ಧ ವಿಮಾನ ಒಪ್ಪಂದಕ್ಕಾಗಿ ಸಹಭಾಗಿ ಸಂಸ್ಥೆಯನ್ನಾಗಿ ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಹೇಳಿದೆ.
ನಿನ್ನೆ ಹೇಳಿಕೆ ನೀಡಿದ್ದ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಲ್ ಹೊಲ್ಯಾಂಡ್ ಅವರ ಹೇಳಿಕೆ ಸಂಬಂಧ ಭುಗಿಲೆದ್ದಿರುವ ವಿವಾದ ಸಂಬಂಧ ಇದೇ ಮೊದಲ ಬಾರಿಗೆ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಹೇಳಿಕೊಂಡಿದೆ. ಭಾರತ ಸರ್ಕಾರದೊಂದಿಗಿನ ಒಪ್ಪಂದದ ಅನ್ವಯ ಯುದ್ಧ ವಿಮಾನಗಳ ನಿರ್ಮಾಣಕ್ಕೆ ನಮಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವ ಬೇಕಿತ್ತು. ಈ ಪೈಕಿ ಉತ್ತಮ ಸಂಸ್ಥೆಗಳ ಹುಡುಕಾಟದಲ್ಲಿದ್ದಾಗ ರಿಲಯನ್ಸ್ ಡಿಫೆನ್ಸ್ ಆಯ್ಕೆ ಉತ್ತಮ ಎನಿಸಿತು. ಇದೇ ಕಾರಣಕ್ಕೆ ಅದೇ ಸಂಸ್ಥೆಯನ್ನುಸಹಭಾಗಿ ಸಂಸ್ಛೆಯನ್ನಾಗಿ ಆಯ್ಕೆ ಮಾಡಿಕೊಂಡೆವು ಎಂದು ಡಸ್ಸಾಲ್ಟ್ ಏವಿಯೇಷನ್ ಸ್ಪಷ್ಟಪಡಿಸಿದೆ.
2017ರಲ್ಲಿ ಉಭಯ ಸಂಸ್ಥೆಗಳೊಂದಿಗೆ ಒಪ್ಪಂದವಾಗಿದ್ದು, ಡಿಸ್ಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ ಎಂಬ ಜಂಟಿ ಸಂಸ್ಥೆ ಉದಯವಾಗಿದ್ದು, ಉಭಯ ಸಂಸ್ಥೆಗಳು ನಾಗಪುರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿವೆ. ಇಲ್ಲಿ ಫಾಲ್ತನ್ ಮತ್ತು ರಾಫೆಲ್ ಯುದ್ಧ ವಿಮಾನಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಮಿಂಚ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆಯ ಸಿಇಒ ಎರಿಕ್ ಟ್ರಾಪಿಯರ್ ಅವರು ಈ ಬಗ್ಗೆ ಮಾತನಾಡಿದ್ದು, ಕಳೆದ ಏಪ್ರಿಲ್ 17ರಂದು ಈ ಸಂದರ್ಶನ ಪ್ರಕಟವಾಗಿತ್ತು. ರಿಲಯನ್ಸ್ ಮಾತ್ರವಲ್ಲದೇ ಬಿಟಿಎಸ್ಎಲ್, ಡಿಇಎಫ್ ಎಸ್ ವೈಎಸ್, ಕೈನೆಟಿಕ್, ಮಹಿಂದ್ರಾ, ಮೈನಿ ಮತ್ತು ಸ್ಯಾಮ್ಟೆಲ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
SCROLL FOR NEXT