ಚೆನ್ನೈ: ತೂತುಕುಡಿ ಜನರ ಭಾವನೆಗಳಿಗೆ ಅನುಗುಣವಾಗಿ ಸ್ಟೆರ್ಲೈಟ್ ತಾಮ್ರ ಘಟಕವನ್ನು ಮುಚ್ಚಲಾಗಿದ್ದು, ಅದನ್ನು ಮತ್ತೆ ತೆರೆಯುವುದಿಲ್ಲ ಎಂದು ತಮಿಳುನಾಡು ಸರ್ಕಾರ ಶನಿವಾರ ಭರವಸೆ ನೀಡಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ನೇಮಕ ಮಾಡಿರುವ ಮೆಘಾಲಯ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ತರುಣ್ ಅಗರ್ವಾಲ್ ನೇತೃತ್ವದ ತ್ರಿಸದಸ್ಯ ಸಮಿತಿ ವೆದಾಂತ್ ಗ್ರೂಪ್ ಸ್ಟೆರ್ಲೈಟ್ ತಾಮ್ರ ಘಟಕಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ತಮಿಳು ಸರ್ಕಾರ ಈ ಸ್ಪಷ್ಟನೆ ನೀಡಿದೆ.
ನಮ್ಮ ನಿರ್ಧಾರ ಸ್ಪಷ್ಟವಾಗಿದೆ. ಒಂದು ಬಾರಿ ಬಂದ್ ಆದ ಘಟಕವನ್ನು ಮತ್ತೆ ಆರಂಭಮಾಡುವ ಪ್ರಶ್ನೆಯೇ ಇಲ್ಲ. ಅವರು ಬಂದ್ ಮಾಡಿದ್ದನ್ನು ಪ್ರಶ್ನಿಸಿ ಎನ್ ಜಿಟಿ ಮೊರೆ ಹೋಗಿದ್ದಾರೆ. ನಾವು ತ್ರಿಸದಸ್ಯ ಸಮಿತಿಯ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದೇವೆ ಎಂದು ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ತೂತುಕುಡಿ ನಿವಾಸಿಗಳ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ 13 ಮಂದಿ ಬಲಿಯಾದ ಬಳಿಕ ಸ್ಟೆರ್ಲೈಟ್ ತಾಮ್ರ ಕಂಪನಿಯನ್ನು ಮುಚ್ಚಲಾಗಿದೆ. ಇದನ್ನು ಪ್ರಶ್ನಿಸಿದ ವೆದಾಂತ್ ಗ್ರೂಪ್ ಎನ್ ಜಿಟಿ ಮೊರೆ ಹೋಗಿದೆ.