ಸೇಲಂ: ನರ್ಸ್ ಕೆಲಸ ಮಾಡುವವರು ಪ್ರತಿ ದಿನ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಮಾಡುವುದು ಸಾಮಾನ್ಯ. ಆದರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ತನ್ನ ಗಂಡ ಅಂತ ತಿಳಿಯದೇ ನರ್ಸ್ ಒಬ್ಬರು ಪ್ರಥಮ ಚಿಕಿತ್ಸೆ ನೀಡಿದ್ದು ದುರಾದೃಷ್ಟವಶಾತ್ ಆತ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸೇಲಂನಲ್ಲಿ ನಡೆದಿದೆ.
ಸೇಲಂನ ಮೆಚ್ಚೇರಿಯ ನಿವಾಸಿ ಶ್ರೀನಿವಾಸನ್ ಪತ್ನಿ ಶಿವಗಾಮಿ ಒಮಲೂರ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀನಿವಾಸನ್ ಕಳೆದ ಭಾನುವಾರ ಮೆಚ್ಚೇರಿಯಿಂದ ಸೇಲಂಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು.
ತಲೆಗೆ ಮತ್ತು ಮುಖಕ್ಕೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಒಮಲೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕರ್ತವ್ಯದಲ್ಲಿದ್ದ ಶಿವಗಾಮಿ ತುರ್ತುಚಿಕಿತ್ಸಾ ವಿಭಾಗಕ್ಕೆ ದಾಖಲಾದ ರೋಗಿಗೆ ಪ್ರಥಮ ಚಿಕಿತ್ಸೆ ನೀಡುತ್ತಾ ಮುಖದ ಮೇಲಿನ ರಕ್ತ ಮತ್ತು ಗಾಯವನ್ನು ಶುಚಿಗೊಳಿಸುವ ಸಂದರ್ಭ ಆ ವ್ಯಕ್ತಿಯೇ ತನ್ನ ಗಂಡನೆಂದು ಗೊತ್ತಾಗಿದೆ.
ಶ್ರೀನಿವಾಸನ್ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ತನ್ನ ಪತಿಯ ಶವ ಕಂಡ ಶಿವಗಾಮಿ ಶವವನ್ನು ಆಲಂಗಿಸಿಕೊಂಡು ಕುಸಿದುಬಿದ್ದರು. ಈ ದೃಶ್ಯ ಎಂತವರ ಕಣ್ಣಲ್ಲು ನೀರೂರುವಂತೆ ಮಾಡಿತು.