ಜೈಪುರ: ಈ ವರ್ಷಾಂತ್ಯಕ್ಕೆ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತೃಪ್ತ ನಾಯಕರ ಜಾತಿ ರಾಜಕೀಯ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.
ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಪುತ್ರ, ಶಿವ ವಿಧಾನಸಭಾ ಕ್ಷೇತ್ರದ ಶಾಸಕ ಮನ್ವಿಂದರ್ ಸಿಂಗ್ ಅವರು ಕಳೆದ ಶನಿವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಶ್ಚಿಮ ರಾಜಸ್ಥಾನದ ರಜಪೂತ ಸಮುದಾಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಮನ್ವಿಂದರ್ ಸಿಂಗ್ ಪಕ್ಷ ತೊರೆದಿರುವುದು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಇತರೆ ಬಿಜೆಪಿ ಅತೃಪ್ತ ನಾಯಕರಾದ ಬ್ರಾಹ್ಮಣ ಸಮುದಾಯದ ಶಾಸಕ ಘನಶ್ಯಾಮ್ ತಿವಾರಿ, ಜಾಟ್ ಸಮುದಾಯದ ಫೈರ್ ಬ್ರಾಂಡ್ ನಾಯಕ ಹನುಮಾನ್ ಬೆನಿವಾಲ್ ಮತ್ತು ಗುಜ್ಜರ್ ಚಳವಳಿಯ ನಾಯಕ ಕಿರೋರಿ ಸಿಂಗ್ ಬೈನ್ಸಿಲಾ ಅವರು ಸಹ ಪಕ್ಷ ತೊರೆಯುವ ಸಿದ್ಧತೆಯಲ್ಲಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ತಂದೆ, ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನೀಡದಿರುವುದರಿಂದ ರಜಪೂತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಮನ್ವಿಂದರ್ ಸಿಂಗ್ ಅವರು ಆರೋಪಿಸಿದ್ದಾರೆ.