ಮೀರತ್ : ಮುಸ್ಲಿಮ್ ಯುವಕನ ಜೊತೆ ಕುಳಿತ ಯುವತಿಗೆ ಮೂವರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಥಳಿತದ ವಿಡಿಯೋ ವೈರಲ್ ಆಗಿದೆ.
ಯುವತಿ ಹಾಗೂ ಮುಸ್ಲಿಮ್ ಯುವಕ ಜೊತೆ ಮೆಡಿಕಲ್ ಕಾಲೇಜ್ ಬಳಿ ಕುಳಿತಿದ್ದ ವೇಳೆಯಲ್ಲಿ ಪ್ರಶ್ನಿಸಿದ ವಿಶ್ವ ಹಿಂದೂ ಪರಿಷತ್ ಸದಸ್ಯರು ಹಾಗೂ ಸ್ಥಳೀಯರು ಅವರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವತಿಯನ್ನು ಜೀಪಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ನಾಲ್ವರು ಪೊಲೀಸರಲ್ಲಿ ಒಬ್ಬ ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಕರಿಸುತ್ತಾ ಮನಬಂದಂತೆ ಪ್ರಶ್ನಿಸಿದ್ದಾರೆ. ಇದೇ ವೇಳೆ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಯುವತಿಯ ತಲೆಗೆ ಹೊಡೆದಿದ್ದಾರೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮುಖಕ್ಕೆ ಹಾಕಿದ ಬಟ್ಟೆಯನ್ನು ಒತ್ತಾಯದಿಂದ ತೆಗೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿದ್ದು, ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.