ಕೋಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಸುಭಾಷ್ ಚಂದ್ರ ಬೋಸ್ ಅವರ ಸೋದರ ಸಂಬಂಧಿ ಚಂದ್ರ ಕುಮಾರ್ ಬೋಸ್ ಅವರು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ದೇವ್ಜಿತ್ ಸರ್ಕಾರ ಹಾಗೂ ಪಕ್ಷದ ಕಾರ್ಯಕರ್ತರನ್ನು ರಕ್ಷಿಸುವುದಕ್ಕೆ ಸ್ಥಳೀಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಯಾವುದೆ ರೀತಿಯ ಪ್ರಯತ್ನ ಮಾಡುತ್ತಿಲ್ಲ ಎಂದು ಚಂದ್ರ ಕುಮಾರ್ ಬೋಸ್ ಆರೋಪಿಸಿದ್ದಾರೆ.
ಟ್ವಿಟರ್ ನಲ್ಲಿ ರಾಜ್ಯಾಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಂದ್ರಕುಮಾರ್ ಬೋಸ್, ಬಿಜೆಪಿ ರಾಜ್ಯಾಧ್ಯಕ್ಷರು ನಿದ್ದೆ ಮಾಡುತ್ತಿದ್ದಾರಾ? ನಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹಿಂಜರಿಯದ ರಾಜ್ಯಾಧ್ಯಕ್ಷರು ನಮ್ಮ ಕಾರ್ಯಕರ್ತರು ಯುವ ಮೋರ್ಚಾದ ಅಧ್ಯಕ್ಷರನ್ನು ರಕ್ಷಿಸಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ದಿನಾಜ್ಪುರದ ಇಸ್ಲಾಮ್ ಪುರದಲ್ಲಿ ಪೊಲೀಸ್ ಫೈರಿಂಗ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಇದನ್ನು ಪ್ರತಿಭಟಿಸಿದ್ದ ಬಿಜೆಪಿ ಯುವ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ವರೆಗೂ ಯುವ ಕಾರ್ಯಕರ್ತರನ್ನು ರಕ್ಷಿಸದ ಬಿಜೆಪಿ ನಾಯಕತ್ವದ ಬಗ್ಗೆ ಸುಭಾಷ್ ಚಂದ್ರ ಬೋಸ್ ಅವರ ಸೋದರ ಸಂಬಂಧಿ ಚಂದ್ರಕುಮಾರ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.