ಗಡಿ ಭದ್ರತಾ ಪಡೆದ ನಿರ್ದೇಶಕ ಕೆ.ಕೆ. ಶರ್ಮಾ
ನವದೆಹಲಿ: ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್'ನ ಪ್ರಧಾನಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಪಾಕಿಸ್ತಾನ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ಗಡಿ ಭದ್ರತಾ ಪಡೆದ ನಿರ್ದೇಶಕ ಜನರಲ್ ಕೆ.ಕೆ. ಶರ್ಮಾ ಅವರು ಶುಕ್ರವಾರ ಹೇಳಿದ್ದಾರೆ.
ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಮುಖ್ಯ ಪೇದೆ ನರೇಂದ್ರ ಸಿಂಗ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ರೀತಿಯ ಘಟನೆಗಳು ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡಿದ ಬಳಿಕ ನಡೆಯುತ್ತಿವೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಯಾವುದೇ ರೀತಿಯ ಬದಲಾವಣೆಯ ವಾತಾವರಣಗಳು ಸಂಭವಿಸಿಲ್ಲ. ಗಡಿಯಲ್ಲಿ ಈ ಹಿಂದೆಂದೂ ಸಂಭವಿಸಿದ ಘಟನೆಗಳನ್ನು ಇಂದು ನಾವು ನೋಡುತ್ತೇವೆ. ಸಾಮಾನ್ಯವಾಗಿ ಬಿಎಟಿ (ಬ್ಯಾಟ್)ಪಡೆಯ ಗಡಿ ನಿಯಂತ್ರಣ ರೇಖೆ ಬಳಿ ಆಕ್ರಮಣ ಮಾಡುತ್ತಿರುತ್ತವೆ. ಈ ಹಿಂದಿನ ಘಟನೆಗಳನ್ನು ಹೋಲಿಕೆ ಮಾಡಿದರೆ, ಈ ಬಾರಿ ಪಾಕಿಸ್ತಾನ ಬಹಳ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದೆ ಎಂದು ತಿಳಿಸಿದ್ದಾರೆ.
ಗಡಿಯಲ್ಲಿ ಹುಲ್ಲುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿರುತ್ತದೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಮಾಹಿತಿ ನೀಡುತ್ತೇವೆ. ತದ್ವಿರುದ್ಧ ದಿಕ್ಕಿನಿಂದ ಗುಂಡಿನ ಚಕಮಕಿಗಳು ಕೇಳಿ ಬಂದರೆ, ಹಿಮ್ಮೆಟ್ಟಿಸುವ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೇನೆ ಯೋಧನೊಬ್ಬನನ್ನು ಎಳೆದುಕೊಂಡು ಹೋಗಿದೆ.
ಪಾಕಿಸ್ತಾನದ ದಾಳಿ ನಡೆಸಿದ ಬಳಿಕ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಹಾಗೂ ಕ್ಯಾಪ್ ದೊರಕಿತ್ತು. ಇದಲ್ಲದೆ, ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಹೋಗಿರುವ ಅನುಮಾನಗಳು ಮೂಡತೊಡಗಿತ್ತು. ಅಂತರಾಷ್ಟ್ರೀಯ ಗಡಿಯಾಗಿದ್ದರಿಂದ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಬಳಿಕ ಪಾಕಿಸ್ತಾನ ಸೇನೆ ನಮ್ಮೊಂದಿಗೆ ಮಾತುಕತೆ ನಡೆಸಲು ಸ್ವಲ್ಪ ಕಾಲ ಬೇಕಾಯಿತು. ಬಳಿಸ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾಗ ನಮ್ಮ ಯೋಧರೊಬ್ಬರ ಮೃತದೇಹ ಪತ್ತೆಯಾಗಿತ್ತು. ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ದೇಹದ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದ ಗಾಯಗಳಿದ್ದವು. ಅಲ್ಲದೆ, ಕತ್ತು ಸೀಳಿದ್ದು ಕೂಡ ಕಂಡು ಬಂದಿತ್ತು ಎಂದಿದ್ದಾರೆ.
ಈ ಘಟನೆ ಸಂಭವಿಸಿದ ಬಳಿಕ ಪಾಕಿಸ್ತಾನ ಸೇನೆ ಗುಂಡಿನ ದಾಳಿಗಳನ್ನು ನಡೆಸುತ್ತಿಲ್ಲ. ಆದರೆ, ಯೋಧನ ಹತ್ಯೆಯನ್ನು ಮಾತ್ರ ನಿರಾಕರಿಸುತ್ತಿದೆ. ಗಡಿಯಲ್ಲಿ ಪಾಕಿಸ್ತಾನ ದಾಳಿ ನಡೆಸಿದ್ದಾಗಲೆಲ್ಲಾ ಸೇನೆ ದಿಟ್ಟ ಉತ್ತರವನ್ನೇ ನೀಡಿದೆ. ಇದೇ ರೀತಿಯ ದಿಟ್ಟ ಉತ್ತರ ಮುಂದುವರೆಯಲಿದೆ. ಪಾಕಿಸ್ತಾನ ಗಡಿಯಲ್ಲಿ ಸಾಕಷ್ಟು ತರಬೇತಿ ಕೇಂದ್ರಗಳು ಹಾಗೂ ಉಗ್ರರ ಅಡಗುತಾಣಗಳಿವೆ. ಗಡಿಯಿಂದ 5-7 ಕಿಮೀ ದೂರದಲ್ಲಿ ಒಂದೊಂದು ಉಗ್ರರ ಕೇಂದ್ರಗಳಿವೆ ಎಂದು ತಿಳಿಸಿದ್ದಾರೆ.