ನವ ದೆಹಲಿ:ಆಧಾರ್, ಮೊಬೈಲ್ ನಂಬರ್ ನಂತಹ ಕೆಲ ಸೂಕ್ಷ್ಮ ಮಾಹಿತಿಯನ್ನು ಆಧಾರ್ ನಲ್ಲಿ ಅಪ್ ಲೋಡ್ ಮಾಡದಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ದೆಹಲಿ ಸರ್ಕಾರ ಸೂಚನೆ ನೀಡಿದೆ.
ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯದ ಸೂಚನೆ ಮೇರೆಗೆ ಈಗಾಗಲೇ ಅಪ್ ಲೋಡ್ ಮಾಡಿದ್ದರೆ ಕೂಡಲೇ ಸೂಕ್ಷ್ಮ ಮಾಹಿತಿಯನ್ನು ತೆಗೆದುಹಾಕುವಂತೆ ದೆಹಲಿ ಸರ್ಕಾರದ ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೆಪ್ಟೆಂಬರ್ 11 ರಂದು ತಿಳಿಸಿದೆ.
ಆಧಾರ್, ಮೊಬೈಲ್ ಸಂಖ್ಯೆಯ ಮಾಹಿತಿಯನ್ನು ಕೆಲ ಇಲಾಖೆಗಳ ಮುಖ್ಯಸ್ಥರು ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡಿದದ್ದು ಕಂಡುಬಂದ ನಂತರ ಈ ರೀತಿಯ ಸೂಚನೆ ನೀಡಲಾಗಿದೆ.
ಐಟಿ ಇಲಾಖೆ ವಿಶೇಷ ಕಾರ್ಯದರ್ಶಿ ಅಜಯ್ ಚಾಗಟಿ ತಮ್ಮ ವೆಬ್ ಸೈಟ್ ನಲ್ಲಿ ಯಾವುದೇ "ಸೂಕ್ಷ್ಮ" ಮಾಹಿತಿಯನ್ನು ಹೊಂದಿಲ್ಲ ಎಂದು ಇಲಾಖೆಗಳಿಂದ ದೃಢೀಕರಣ ಪತ್ರವನ್ನು ಕೋರಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಹಾಗೂ ಆಧಾರ್ ಕಾಯ್ದೆ 2016ರ ಎಲ್ಲ ನಿಬಂಧನೆಗಳನ್ನು ಅನುಸರಿಸುವಂತೆ ಎಲ್ಲಾ ಇಲಾಖೆಗಳು ಹಾಗೂ ಏಜೆನ್ಸಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 26 ರಂದು ಆಧಾರ್ ಗೆ ಸಾಂವಿಧಾನಿಕ ಸ್ಥಾನಮಾನದ ತೀರ್ಪನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್, ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕ ಅಥವಾ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿತ್ತು.