ಸಾಕ್ಷ್ಯಚಿತ್ರ ವಿವಾದ: Netflixಗೆ ಸುಕೇಶ್ ಚಂದ್ರಶೇಖರ್ ಲೀಗಲ್ ನೋಟಿಸ್, ತಡೆ ಕೋರಿ ಆಗ್ರಹ

ನವದೆಹಲಿ: ತನ್ನ ಜೀವನದ ಕಥೆಯನ್ನು ಆಧರಿಸಿ ನಿರ್ಮಿಸಲಾಗಿರುವ ಸಾಕ್ಷ್ಯಚಿತ್ರ ಬಿಡುಗಡೆಗೆ ತಡೆ ನೀಡುವಂತೆ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ನೆಟ್‌ಫ್ಲಿಕ್ಸ್ ಹಾಗೂ ಸಾಕ್ಷ್ಯಚಿತ್ರದ ನಿರ್ಮಾಪಕರಿಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.
Love, Scam Aur Dhokha: The Sukesh Chandrashekhar Story ಹೆಸರಿನ ಈ ಸಾಕ್ಷ್ಯಚಿತ್ರ ಡಿಸೆಂಬರ್ 18, 2026ರಂದು ಬಿಡುಗಡೆಯಾಗಬೇಕಿದೆ.
ಆದರೆ, ತನ್ನ ಅನುಮತಿ ಪಡೆಯದೆ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿರುವ ಸುಕೇಶ್, ಅದರ ಬಿಡುಗಡೆ, ಟ್ರೇಲರ್‌ಗಳು ಮತ್ತು ಪ್ರಚಾರದ ವಿಡಿಯೋಗಳನ್ನು ತಡೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ತಮ್ಮ ವಕೀಲ ಅನಂತ್ ಮಲಿಕ್ ಅವರ ಮೂಲಕ ಕಳುಹಿಸಿರುವ ನೋಟಿಸ್‌ಗೆ 72 ಗಂಟೆಗಳ ಒಳಗೆ ಉತ್ತರಿಸುವಂತೆ ನೆಟ್‌ಫ್ಲಿಕ್ಸ್ ಮತ್ತು ನಿರ್ಮಾಪಕರಿಗೆ ಸೂಚಿಸಲಾಗಿದೆ.
ಅಭಿಪ್ರಾಯ ಕೇಳದೆ ಸಾಕ್ಷ್ಯಚಿತ್ರ ನಿರ್ಮಾಣ
ಸಾಕ್ಷ್ಯಚಿತ್ರ ನಿರ್ಮಾಪಕರು ತನ್ನನ್ನು ಸಂಪರ್ಕಿಸಿಲ್ಲ. ಪ್ರಕರಣದ ಬಗ್ಗೆ ತನ್ನ ಕಡೆಯ ವಾದವನ್ನು ಮಂಡಿಸಲು ಅವಕಾಶ ನೀಡಿಲ್ಲ. ಅಲ್ಲದೆ, ತನ್ನ ಹೆಸರು, ಫೋಟೊ, ಧ್ವನಿ, ವ್ಯಕ್ತಿತ್ವ ಅಥವಾ ಜೀವನದ ಕಥೆಯನ್ನು ಬಳಸಲು ಯಾವುದೇ ಅನುಮತಿ ನೀಡಿಲ್ಲ ಎಂದು ಸುಕೇಶ್ ಪರ ವಕೀಲರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಸುಮಾರು 200 ಕೋಟಿ ರೂಪಾಯಿ ಸುಲಿಗೆ ಪ್ರಕರಣ ಹಾಗೂ ತಿಹಾರ್ ಜೈಲಿನಲ್ಲಿದ್ದಾಗ ನಡೆದಿವೆ ಎನ್ನಲಾದ ಘಟನೆಗಳು ಪ್ರಸ್ತುತ ದೆಹಲಿಯ ವಿಶೇಷ MCOCA ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ಮುಂದಿನ ವಿಚಾರಣೆ ನವೆಂಬರ್ 30, 2026ರಂದು ನಿಗದಿಯಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗದ ಆರೋಪಗಳ ಬದಲಿಗೆ ಮಾಧ್ಯಮ ವರದಿಗಳು ಮತ್ತು ಇಂಟರ್‌ನೆಟ್‌ನಲ್ಲಿರುವ ಮಾಹಿತಿಯನ್ನು ಆಧರಿಸಿ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಇದರಿಂದ ಏಕಪಕ್ಷೀಯ ಚಿತ್ರಣ ಮೂಡಬಹುದು ಎಂಬುದು ಸುಕೇಶ್ ಪರ ವಕೀಲರ ವಾದವಾಗಿದೆ.
ಆಗಸ್ಟ್ 20, 2026ರಂದು ಪ್ರಕಟವಾದ ಒಂದು ಪ್ರಕರಣದ ತೀರ್ಪನ್ನು ಹೊರತುಪಡಿಸಿ, ಉಳಿದ ಪ್ರಕರಣಗಳಲ್ಲಿ ಸುಕೇಶ್ ಅಪರಾಧಿ ಎಂದು ಸಾಬೀತಾಗಿಲ್ಲ. ಆ ತೀರ್ಪಿನ ವಿರುದ್ಧವೂ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ವಿಚಾರಣೆ ಮುಗಿಯುವವರೆಗೆ ಬಿಡುಗಡೆ ಮುಂದೂಡಲು ಒತ್ತಾಯ
ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಸಾಕ್ಷ್ಯಚಿತ್ರದ ಬಿಡುಗಡೆ ಮುಂದೂಡಲಾಗುವುದು ಎಂಬ ಲಿಖಿತ ಭರವಸೆಯನ್ನು 72 ಗಂಟೆಗಳ ಒಳಗೆ ನೀಡಬೇಕು ಎಂದು ಸುಕೇಶ್ ಒತ್ತಾಯಿಸಿದ್ದಾರೆ.
ಸಾಕ್ಷ್ಯಚಿತ್ರ ಮಾತ್ರವಲ್ಲದೆ, ಅದರ ಟ್ರೇಲರ್‌ಗಳು ಮತ್ತು ಪ್ರಚಾರದ ವಿಡಿಯೋಗಳಿಗೂ ಈ ಬೇಡಿಕೆ ಅನ್ವಯಿಸುತ್ತದೆ. ನವೆಂಬರ್ 26ರಂದು ನೆಟ್‌ಫ್ಲಿಕ್ಸ್ ಈ ಸಾಕ್ಷ್ಯಚಿತ್ರವನ್ನು ಘೋಷಿಸಿತ್ತು.
ಎರಡು ವರ್ಷಗಳಿಗೂ ಹೆಚ್ಚು ಕಾಲದ ಸಂಶೋಧನೆಯ ಆಧಾರದಲ್ಲಿ ನಿರ್ಮಿಸಲಾಗಿರುವ ಈ ಸಾಕ್ಷ್ಯಚಿತ್ರವು ಬೆಂಗಳೂರಿನಿಂದ ಆರಂಭವಾದ ಸುಕೇಶ್‌ನ ಪಯಣ, ದೇಶದ ಗಮನ ಸೆಳೆದ ವಂಚನೆ ಪ್ರಕರಣಗಳು, ತಿಹಾರ್ ಜೈಲಿನೊಳಗಿಂದಲೇ ಅಕ್ರಮ ಚಟುವಟಿಕೆಗಳನ್ನು ನಡೆಸಿದ ಆರೋಪಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳೊಂದಿಗಿನ ಸಂಪರ್ಕಗಳ ಕುರಿತು ಬೆಳಕು ಚೆಲ್ಲಲಿದೆ ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



