ಮಧ್ಯಪ್ರದೇಶ ಚುನಾವಣೆ: ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ 6 ಪಕ್ಷಗಳು!
ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನ, ಮೊಜೋರಾಮ್, ಚತ್ತೀಸ್ ಗಢದ ವಿಧಾನಸಭಾ ಚುನಾವಣೆಗಳು 2019 ರ ಮಹಾಘಟಬಂಧನ್ ಗೆ ಪ್ರಯೋಗಾಲಯ ಇದ್ದಂತೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಪ್ರಾದೇಶಿಕ ಪಕ್ಷಗಳು ಮುಂದಾಗಿವೆ.
ಈಗಾಗಲೇ ಯುಪಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಸಮಾಜವಾದಿ ಪಕ್ಷವೂ ಸೇರಿದಂತೆ 6 ಪಕ್ಷಗಳು ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿವೆ. ಆದರೆ ಎಡಪಕ್ಷಗಳು ಮಾತ್ರ ಕಾಂಗ್ರೆಸ್ ನೇತೃತ್ವವನ್ನು ತಿರಸ್ಕರಿಸಿದ್ದು, ಯುನೈಟ್ ಫ್ರಂಟ್ ನ ಪ್ರಯೋಗ ವಿಫಲಗೊಂಡಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಿಂದುತ್ವದ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದು, ಕಾಂಗ್ರೆಸ್ ಗೆ ನಮ್ಮ ಬೆಂಬಲವಿಲ್ಲ ಎಂದು ಸಿಪಿಐ(ಎಂ) ಹೇಳಿದೆ. ಚುನಾವಣಾ ಕಣವಾಗಿರುವ ಮಧ್ಯಪ್ರದೇಶದಲ್ಲಿ ಸೆ.30 ರಂದು ಸಿಪಿಐ, ಸಿಪಿಐ(ಎಂ) ಸೇರಿದಂತೆ ಹಲವು ಪಕ್ಷಗಳು ಸಭೆ ನಡೆಸಿ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಲು ಸಮ್ಮತಿ ಸೂಚಿಸಿದವು. ಆದರೆ ಸಿಎಪಿಐ(ಎಂ) ಮಾತ್ರ ಸಭೆಯ ನಿರ್ಣಯದ ವಿರುದ್ಧದ ನಿಲುವನ್ನು ಪ್ರಕಟಿಸಿದ್ದು, ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂದಿದೆ.
ಎಲ್ ಜೆಡಿ, ಎಸ್ ಪಿ, ಸಿಪಿಐ, ಬಹುಜನ್ ಸಂಘರ್ಷ್ ದಳ (ಬಿಎಸ್ ಡಿ), ಜಿಪಿಪಿ, ರಾಷ್ಟ್ರೀಯ ಸಮಂತಾ ದಳ (ಆರ್ ಎಸ್ ಡಿ) ಹಾಗೂ ಪ್ರಜಾತಾಂತ್ರಿಕ್ ಸಮಾಧಾನ್ ಪಾರ್ಟಿಯ ನಾಯಕರು, ಮೈತ್ರಿ ರಚನೆಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿದ್ದರು. ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಿದ್ಧವಿದೆ ಎಂದು ಎಲ್ ಜೆಡಿ ನಾಯಕ ಗೋವಿಂದ್ ಯಾದವ್ ತಿಳಿಸಿದ್ದಾರೆ.