ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಶಬರಿಮಲೆ ದೇವಾಲಯ ಪ್ರವೇಶಿಸುವ ಮಹಿಳೆಯರ ಬಗ್ಗೆ ಟಿಡಿಪಿ ಮುಖ್ಯಸ್ಥರು ಹೀಗಂದ್ರು!
ತಿರುವನಂತಪುರಂ: ಎಲ್ಲಾ ವಯಸ್ಸಿನ ಮಹಿಳೆಯರೂ ಶಬರಿಮಲೆ ದೇವಾಲಯಕ್ಕೆ ಹೋಗಬಹುದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ದೇವಾಲಯಕ್ಕೆ ತೆರಳುವ ಮಹಿಳೆಯರ ಬಗ್ಗೆ ಕುತೂಹಲ ಮೂಡಿದೆ.
ವಯಸ್ಸಿನ ಮಿತಿ ಇಲ್ಲದೇ ಮಹಿಳೆಯರು ದೇವಾಲಯಕ್ಕೆ ತೆರಳುವುದರ ಬಗ್ಗೆ ತಿರುವಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಎ ಪದ್ಮಕುಮಾರ್ "ಅಯ್ಯಪ್ಪ ಸ್ವಾಮಿಯ ನಿಜವಾದ ಮಹಿಳಾ ಭಕ್ತರು" ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವಯಸ್ಸಿನ ಮಿತಿ ಇಲ್ಲದೇ ದೇವಾಲಯ ಪ್ರವೇಶಿಸುವ ಸಾಧ್ಯತೆ ಕಡಿಮೆ. ಮಹಿಳಾ ಹಕ್ಕುಗಳ ಕಾರ್ಯಕರ್ತರು ಮಾತ್ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೇವಾಲಯ ಪ್ರವೇಶಿಸುತ್ತಾರೆ ಎಂದು ಹೇಳಿದ್ದಾರೆ.
10-50 ವಯಸ್ಸಿನ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು (800 ವರ್ಷಗಳ ಹಿಂದಿನ ಪದ್ಧತಿ)ಯನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ಮಹಿಳೆ ಮತ್ತು ಪುರುಷರ ನಡುವೆ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿತ್ತು.
ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿರುವ ಎ.ಪದ್ಮಕುಮಾರ್, ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸುವುದಕ್ಕಾಗಿ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕಿದ್ದು. ಟಿಡಿಬಿ ಸರ್ಕಾರದಿಂದ 100 ಎಕರೆಯಷ್ಟು ಅರಣ್ಯ ಭೂಮಿಯನ್ನು ನೀಡುವಂತೆ ಮನವಿ ಮಾಡಲಿದೆ, ಈ ನಡುವೆ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆಗೂ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.