ದೇಶ

ನೌಕಾದಳ ಮುಖ್ಯಸ್ಥರ ನೇಮಕ ಪ್ರಶ್ನಿಸಿ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ವರ್ಮಾ

Lingaraj Badiger
ನವದೆಹಲಿ: ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರ ನೇಮಕ ಪ್ರಶ್ನಿಸಿ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ಅವರು ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಹಿಂಪಡೆದಿದ್ದಾರೆ.
ನಾವು ಮೊದಲು ಈ ಪ್ರಕರಣವನ್ನು ಸಂಪುಟ ನೇಮಕಾತಿ ಸಮಿತಿ(ಎಸಿಸಿ)ಗೆ ದಾಖಲಿಸುತ್ತೇವೆ. ಒಂದು ವೇಳೆ ಅವರು ಪ್ರಕರಣದ ವಿಚಾರಣೆ ನಡೆಸದಿದ್ದರೆ ಮತ್ತೆ ಹೊಸದಾಗಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ವರ್ಮಾ ಅವರ ಪರ ವಕೀಲ ಅಂಕೂರ್ ಚಿಬ್ಬರ್ ಅವರು ಹೇಳಿದ್ದಾರೆ.
ನಿನ್ನೆ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ನೀವು ಮೊದಲು ಕೇಂದ್ರ ಸರ್ಕಾರದ ನೇಮಕಾತಿ ಸಮಿತಿಯನ್ನು ಏಕೆ ಸಂಪರ್ಕಿಸಬಾರದು? ಎಂದು ಪ್ರಶ್ನಿಸಿದೆ.
ಸರ್ಕಾರ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಿ ನೌಕಾಪಡೆಯ ಮುಖ್ಯಸ್ಥರಾಗಿ ಕರಮ್‌ಬೀರ್‌ ಸಿಂಗ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿ ವರ್ಮಾ ಅವರು ಸೋಮವಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ನೌಕಾಪಡೆಯ ಮುಖ್ಯಸ್ಥ ಅಡ್ವಿರಲ್ ಸುನೀಲ್ ಲಾಂಬಾ ಅವರು ಮೇ 31ಕ್ಕೆ ನಿವೃತ್ತರಾಗುತ್ತಿದ್ದು, 24ನೇ ನೌಕಾಪಡೆ ಮುಖ್ಯಸ್ಥರಾಗಿ ಕರಮ್ ಬೀರ್ ಸಿಂಗ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಆದರೆ ಸೇವಾ ಹಿರಿತನದ ಆಧಾರದ ಮೇಲೆ ವರ್ಮಾ ಅವರು ನೌಕಾಪಡೆಯ ಉನ್ನತ ಹುದ್ದೆ ಅಲಂಕರಿಸಬೇಕಿತ್ತು. ತಮ್ಮ ಸೇವಾ ಹಿರಿತನ ಪರಿಗಣಿಸದೆಯೇ ಸರ್ಕಾರ ಮಾಡಿರುವ ನೇಮಕವನ್ನು ವರ್ಮಾ ಅವರನ್ನು ನ್ಯಾಯಾಮಂಡಳಿಯಲ್ಲಿ ಪ್ರಶ್ನಿಸಿದ್ದರು.
SCROLL FOR NEXT