ನವದೆಹಲಿ: ವಿವೆಕ್ ಒಬೆರಾಯ್ ಅಭಿನಯದ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ "ಪಿಎಂ ನರೇಂದ್ರ ಮೋದಿ" ಚಿತ್ರ ಬಿಡುಗಡೆಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ತಡೆ ನೀಡಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ವ್ಯಕ್ತಿಗಳ ಯಾವುದೇ ಜೀವನಾಧಾರಿತ ಚಿತ್ರ ಬಿಡುಗಡೆಗೆ ಅವಕಾಶ ಇಲ್ಲ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಆಯೋಗದ ಈ ಆದೇಶ ಮೋದಿ ಚಿತ್ರ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂದು ದೂರಿದ್ದ ಪ್ರತಿಪಕ್ಷಗಳಿಗೆ ಜಯ ಸಿಕ್ಕಂತಾಗಿದೆ.
ನಿನ್ನೆಯಷ್ಟೆ 'ಪಿಎಂ ನರೇಂದ್ರ ಮೋದಿ' ಸಿನಿಮಾ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ 'ಇದೊಂದು ವಿವಾದದ ವಿಷಯವೇ ಅಲ್ಲ, ಅರ್ಜಿದಾರರು ಬೇಕಿದ್ದರೆ ಚುನಾವಣಾ ಆಯೋಗದ ಮೊರೆ ಹೋಗಬಹುದು' ಎಂದು ತಿಳಿಸಿತು.
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇನ್ನೂ ಪ್ರಮಾಣಪತ್ರ ನೀಡಿಲ್ಲ. ಹಾಗಾಗಿ ಈ ಹಂತದಲ್ಲಿ ಚಿತ್ರ ಬಿಡುಗಡೆಯ ವಿಚಾರವಾಗಿ ತಾನು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಇಂದು ಬೆಳಗ್ಗಯಷ್ಟೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆದಿರುವ ಚಿತ್ರದ ನಿರ್ಮಾಪಕರು, 'ಮೊದಲ ಹಂತದ ಮತದಾನ ನಡೆಯಲಿರುವ ಏ.11ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಚುನಾವಣಾ ಆಯೋಗ ಅದಕ್ಕೆ ತಡೆ ನೀಡಿದೆ.