ದೇಶ

ರಾಫೆಲ್ ಯುದ್ಧ ವಿಮಾನ ಇದ್ದಿದ್ದರೆ ಬಾಲಾಕೋಟ್ ದಾಳಿ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು: ವಾಯುಸೇನೆ

Srinivasamurthy VN
ನವದೆಹಲಿ: ರಾಫೆಲ್ ಯುದ್ಧ ವಿಮಾನ ಇದ್ದಿದ್ದರೆ ಬಾಲಾಕೋಟ್ ವಾಯುದಾಳಿ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು ಎಂದು ಭಾರತೀಯ ಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಹೇಳಿದ್ದಾರೆ.
ಭಾರತದ ನಿವೃತ್ತ ಏರ್ ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಅವರ ಜನ್ಮ ಶತಮಾನೋತ್ಸವ ನಿಮಿತ್ತ ದೆಹಲಿಯ ಸುಭ್ರತೋ ಪಾರ್ಕ್ ನಲ್ಲಿ ನಡೆದ 'ಭವಿಷ್ಯದ ಅಂತರಿಕ್ಷ ಶಕ್ತಿ ಮತ್ತು ತಂತ್ರಜ್ಞಾನದ ಪ್ರಭಾವ' ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಬಿಎಸ್ ಧನೋವಾ ಅವರು, ಬಾಲಾಕೋಟ್ ದಾಳಿ ಖಂಡಿತಾ ಮಿಲಿಟರಿಯೇತರ ಕಾರ್ಯಾಚರಣೆಯಾಗಿತ್ತು. ಉಗ್ರರ ಮೂಲಸೌಕರ್ಯಗಳನ್ನು ಧ್ವಂಸ ಮಾಡುವುದು ನಮ್ಮ ಗುರಿಯಾಗಿತ್ತು. ನಮ್ಮ ಗುರಿಯನ್ನು ನಾವು ನಿಖರವಾಗಿ ತಲುಪಿದ್ದೇವೆ. ಆದರೆ ಬಾಲಾಕೋಟ್ ವಾಯುದಾಳಿ ವೇಳೆ ರಾಫೆಲ್ ಯುದ್ಧ ವಿಮಾನ ವಿದ್ದಿದ್ದರೆ. ದಾಳಿ ಇನ್ನೂ ಪರಿಣಾಕಾರಿಯಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿ ವೇಳೆ ವಾಯುದಾಳಿ ಅತ್ಯಂತ ಕ್ಲಿಷ್ಟಕರ ಮತ್ತು ಅಪಾಯಕಾರಿಯಾಗಿರುತ್ತದೆ. ಆದರೆ ನಾವು ತಾಂತ್ರಿಕವಾಗಿ ಸಾಕಷ್ಟು ಬೆಳೆದಿದ್ದು, ನಮ್ಮಲ್ಲಿ ಸಾಕಷ್ಟು ತಂತ್ರಜ್ಞಾನಗಳನ್ನೊಳಗೊಂಡ ಯುದ್ಧ ವಿಮಾನಗಳಿವೆ. ಮಿಗ್ 21 ಬೈಸನ್, ಮಿರಾಜ್ 2000 ವಿಮಾನಗಳನ್ನು ಅಪ್ ಗ್ರೇಡ್ ಮಾಡಲಾಗಿದೆ. ಹೀಗಾಗಿ ನಮ್ಮ ಯೋಜನೆಯಂತೆ ನಾವು ನಿಖರವಾಗಿ ದಾಳಿ ಮಾಡಿದೆವು ಎಂದು ಹೇಳಿದರು.
ಇದೇ ವೇಳೆ ವಾಯುದಾಳಿ ಯಶಸ್ಸಿನ ಕುರಿತು ಮಾತನಾಡಿದ ಧನೋವಾ ಅವರು, ಇಲ್ಲಿ ವೈಫಲ್ಯ ಅಥವಾ ಯಶಸ್ಸಿನ ಮಾತು ಬರುವುದಿಲ್ಲ. ಆದರೆ ನಾವು ಯೋಜಿಸಿದ್ದ ಗುರಿಯನ್ನು ನಿಖರವಾಗಿ ಪೂರ್ಣಗೊಳಿಸಿದ್ದೇವೆ. ಅಂತೆಯೇ ನಮ್ಮ ಒಂದು ಯುದ್ಧ ವಿಮಾನ ಮಿಗ್ 21 ಬೈಸನ್ ಅನ್ನು ನಾವು ಕಳೆದುಕೊಂಡೆವು. ನಮ್ಮ ಪೈಲಟ್ ಸಿಕ್ಕಿಬಿದ್ದರು. ಆದರೆ ನಾವೂ ಕೂಡ ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಿದೆವು. ಇದು ತಾಂತ್ರಿಕವಾಗಿ ಸಾಬೀತಾಗಿದೆ. ಈ ವಾಯುದಾಳಿ ಯಾವುದೇ ಒಂದು ದೇಶದ ಮೇಲಿನ ಯುದ್ಧವಾಗಿರಲಿಲ್ಲ. ಆದರೆ ಭಾರತ ತನ್ನ ಸಾಮರ್ಥ್ಯ ಪರಿಚಯ ಮಾತ್ರ ಮಾಡಿಕೊಟ್ಟಿದೆ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಕೂರುವುದಿಲ್ಲ ಎಂಬುದು ಇದೀಗ ವಿಶ್ವಕ್ಕೇ ಪರಿಚಿತವಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ 2040ರ ವೇಳೆಗೆ ನಮ್ಮದೇಶದಲ್ಲೇ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನಗಳು ತಯಾರಾಗುತ್ತಿವೆ. ಇದು ನಮಗೆ ತಾಂತ್ರಿಕ ಬಲವನ್ನು ನೀಡಲಿದೆ. ಆದರೂ ಪ್ರಸ್ತುತ ಕೆಲ ಕ್ಲಿಷ್ಟಕರ ತಂತ್ರಜ್ಞಾನಗಳಾದ AWACS 4ನೇ ತಲೆಮಾರಿನ ಯುದ್ಧ ವಿಮಾನ, ಐಎಸ್ಆರ್ ಪ್ಲಾಟ್ ಫಾರ್ಮ್ಸ್ ಗಳನ್ನು ನಾವು ಆರ್ಥೈಸಿಕೊಳ್ಳಬೇಕಿದೆ. ವಿಶ್ವದ ಸುಮಾರು 5 ಸಾವಿರ ಯುದ್ಧ ವಿಮಾನಗಳು ಪಾಲ್ಗೊಂಡಿದ್ದ 'ಗಗನ್ ಶಕ್ತಿ 2018' ವಾಯು ಶಕ್ತಿ ಪ್ರದರ್ಶನ ನಮ್ಮ ಆತ್ಮಬಲವನ್ನು ಹೆಚ್ಚಿಸಿದೆ ಎಂದು ಧನೋವಾ ಹೇಳಿದರು.
SCROLL FOR NEXT