ದೇಶ

'ತಲೆಮರೆಸಿಕೊಂಡ ಅಪರಾಧಿ' ಎಂದು ಘೋಷಿಸಿರುವುದು ನನಗೆ ಆರ್ಥಿಕ ಮರಣದಂಡನೆ ಕೊಟ್ಟಂತೆ: ವಿಜಯ್ ಮಲ್ಯ

Srinivasamurthy VN
ಮುಂಬೈ: ನನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಘೋಷಿಸಿರುವುದು ನನ್ನ ಪಾಲಿಗೆ ಆರ್ಥಿಕ ಮರಣದಂಡನೆಯಾದಂತಾಗಿದೆ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆಯ ಕೆಲ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮಲ್ಯ ಪರ ವಕೀಲರು ಈ ಹೇಳಿಕೆ ನೀಡಿದ್ದು, 'ನನ್ನನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿರುವುದು ಮತ್ತು ತನ್ನ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡಿರುವುದು ತನ್ನ ಪಾಲಿಗೆ ಆರ್ಥಿಕ ಮರಣದಂಡನೆಯಾದಂತಾಗಿದೆ ಎಂದು ಮಲ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ.
'ನನ್ನ ಸಾಲಗಳು ಹಾಗೂ ಅದರ ಮೇಲಿನ ಬಡ್ಡಿ ಮೊತ್ತವು ಹೆಚ್ಚಾಗುತ್ತಿವೆ. ಈ ಸಾಲಗಳನ್ನ ತೀರಿಸುವಷ್ಟು ಆಸ್ತಿಗಳು ನನ್ನಲ್ಲಿವೆ. ಆದರೆ, ಈ ಆಸ್ತಿ ಬಳಸಿ ಸಾಲ ತೀರಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ನನ್ನ ಆಸ್ತಿಗಳ ಮೇಲೆ ನನಗೇ ಅಧಿಕಾರ ಇಲ್ಲದಂತಾಗಿದೆ. ಇದು ನನಗೆ ಆರ್ಥಿಕ ಮರಣ ದಂಡನೆ ನೀಡಿದಂತಾಗಿದೆ' ಎಂದು ಮಲ್ಯ ಪರ ವಕೀಲ ಅಮಿತ್ ದೇಸಾಯಿ ಅವರು ಹೈಕೋರ್ಟ್ ಪೀಠಕ್ಕೆ ತಿಳಿಸಿದ್ದಾರೆ.
ಹಾಗೆಯೇ, ದೇಶಾದ್ಯಂತ ಇರುವ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮಕ್ಕೆ ತಡೆ ನೀಡಬೇಕೆಂದೂ ವಕೀಲ ಅಮಿತ್ ದೇಸಾಯಿ ಮನವಿ ಮಾಡಿಕೊಂಡರು. 
ಆದರೆ, ನ್ಯಾ| ರಂಜಿತ್ ಮೋರೆ ಮತ್ತು ನ್ಯಾ. ಭಾರತಿ ದಾಂಗ್ರೆ ಅವರಿದ್ದ ಬಾಂಬೆ ಹೈಕೋರ್ಟ್ ಪೀಠವು ವಿಜಯ್ ಮಲ್ಯ ಅವರ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು. 2018ರ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಸರ್ಕಾರವು ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ (ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆ್ಯಕ್ಟ್) ರೂಪಿಸಿತ್ತು. ಇದರ ಆಧಾರದ ಮೇಲೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಇದೇ ಜನವರಿ ತಿಂಗಳಲ್ಲಿ ಮಲ್ಯ ಅವರನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು.
SCROLL FOR NEXT