ದೇಶ

ಪಜ್ ಜಿ ಬಿಡಿ.. ಬಂದೇ ಬಿಡ್ತು, ಭಾರತೀಯ ವಾಯುಪಡೆಯ 'ಏರ್ ವಾರಿಯರ್' ಮೊಬೈಲ್ ಗೇಮ್!

Srinivasamurthy VN
ನವದೆಹಲಿ: ಪಬ್ ಜೀ.. ಬ್ಲೂವೇಲ್ ನಂತಹ ಕಿಲ್ಲರ್ ಗೇಮ್ ಗಳಿಂದ ದಾರಿ ತಪ್ಪಿರುವ ಯುವ ಜನತೆಗೆ ಭಾರತೀಯ ವಾಯು ಸೇನೆ ತನ್ನದೇ ಆದ ವಿಶಿಷ್ಠ ರೀತಿಯ ಗೇಮ್ ಅನ್ನು ಪರಿಚಯಿಸಿದೆ.
ಹೌದು... ಯುವಕರು ಮತ್ತು ಮಕ್ಕಳನ್ನು ಸೆಳೆಯಲು ಭಾರತೀಯ ವಾಯುಪಡೆ ಹೊಸ ಮೊಬೈಲ್ ಗೇಮ್ ಅನ್ನು ಬಿಡುಗಡೆ ಮಾಡಿದ್ದು, 'Indian Air Force: A Cut Above'  ವಿನೂತನ ಗೇಮ್ ಅನ್ನು ಲಾಂಚ್ ಮಾಡಿದೆ.
ನಿನ್ನೆ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಾಯುಪಡೆಯ ಮುಖ್ಯಸ್ಥರಾದ ಬಿರಿಂದರ್ ಸಿಂಗ್ ಧನೋವಾ ಅವರು ಈ ವಿಶಿಷ್ಠ ಗೇಮ್ ಅನ್ನು ಬಿಡುಗಡೆ ಮಾಡಿದ್ದು, ಇದು ಮೊದಲ ಹಂತದ ಗೇಮ್ ಆಗಿದೆ ಎಂದು ವಾಯುಸೇನೆ ಹೇಳಿದೆ. ಪ್ರಸ್ತುತ ಬಿಡುಗಡೆಯಾಗಿರುವ ಗೇಮ್ ಆನ್‌ ಲೈನ್‌ ನಲ್ಲಿ ಸಿಂಗಲ್ ಪ್ಲೇಯರ್ ಮತ್ತು ಮಲ್ಟಿ ಪ್ಲೇಯರ್ ಆಗಿ ಆಡಬಹುದಾದ 3D ಏರ್ ಕಾಂಬ್ಯಾಟ್ ಗೇಮ್ ಆಗಿದೆ. ಮುಂಬರುವ ದಿನಗಳಲ್ಲಿ ಈ ಗೇಮ್ ನ ಎರಡನೇ ಹಂತ ಕೂಡ ಬಿಡುಗಡೆಯಾಗಲಿದ್ದು, ಇದು ಮಲ್ಟಿಪ್ಲೇಯರ್ ಗೇಮ್ ಆಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2ನೇ ಹಂತದ ಗೇಮ್ ಅನ್ನು ವಾಯುಪಡೆ ದಿನಾಚರಣೆಯಂದು ಬಿಡುಗಡೆ ಮಾಡುವುದಾಗಿ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ. ಈ ಗೇಮ್ ಆಂಡ್ರಾಯ್ಡ್ ಮತ್ತು ಐಓಎಸ್'ಗಳಲ್ಲಿ ಲಭ್ಯವಿದ್ದು, ಈ ಗೇಮ್ ಗೆ 'Indian Air Force: A Cut Above' ಎಂದು ಹೆಸರಿಡಲಾಗಿದೆ. ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೇಮ್ ನ ವೈಶಿಷ್ಟ್ಯವೇನು?
ಗೇಮ್ ನ ಮೂಲಕ ಭಾರತೀಯ ವಾಯುಪಡೆಯ ಕುರಿತು ಮಾಹಿತಿಯನ್ನು ಯುವಜನತೆಯೊಂದಿಗೆ ಹಂಚಿಕೊಳ್ಳುವುದೇ ಈ ಗೇಮ್ ನ ಮುಖ್ಯ ಉದ್ದೇಶವಾಗಿದೆ. ಗೇಮ್ ನಲ್ಲಿ ವಾಯುಪಡೆಯಲ್ಲಿರುವ ಫೈಟರ್, ಹೆಲಿಕಾಪ್ಟರ್, ಏರ್ ಡಿಫೆನ್ಸ್ ಮತ್ತು ಟ್ರಾನ್ಸ್ಪೋರ್ಟ್ ಏರ್ ಕ್ರಾಫ್ಟ್‌ಗಳೊಂದಿಗೆ, ಭವಿಷ್ಯದಲ್ಲಿ ವಾಯುಪಡೆಯನ್ನು ಸೇರಲಿರುವ ಫೈಟ್ ಮತ್ತು ಕಾಂಬಾಟ್ ಏರ್ ಕ್ರಾಫ್ಟ್ ಗಳನ್ನೂ ಸಹ ಕಾಣಬಹುದು. ಅಲ್ಲದೆ ಈ ಹಿಂದೆ ಬಾಲಾಕೋಟ್ ವಾಯುದಾಳಿಯಲ್ಲಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಪಾತ್ರವನ್ನೂ ಇಲ್ಲಿ ಕಾಣಬಹುದಾಗಿದೆ.
ಅಂದರೆ, ಮಕ್ಕಳು ಆಟದ ಮೂಲಕ ರಾಫಲ್ ಫೈಟರ್ ಜೆಟ್‌ಗಳನ್ನು ಹಾರಿಸಲು ಸಾಧ್ಯವಾಗುತ್ತದೆ. 2014 ರಲ್ಲಿ ಮೊಟ್ಟ ಮೊದಲ ಬಾರಿಗೆ ವಾಯುಪಡೆಯು ಮೊಬೈಲ್ ಗೇಮ್ ಅನ್ನು ಪ್ರಾರಂಭಿಸಿತ್ತು. ಆದರೆ ಈ ಗೇಮ್ ಹಳೆಯದಕ್ಕಿಂತ ವಿಭಿನ್ನ ಹಾಗೂ ವಿಶೇಷವಾಗಿದೆ.  ಈ ಗೇಮ್ ನಲ್ಲಿ ಒಟ್ಟು ಹತ್ತು ಮಿಷನ್ ಗಳಿದ್ದು, ಪ್ರತಿ ಮಿಷನ್ ನಲ್ಲಿ 3 ಪ್ರತ್ಯೇಕ ಮಿಷನ್ ಗಳಿರುತ್ತವೆ. ಅಂತೆಯೂ ಪ್ರತೀ ಕಾರ್ಯಾಚರಣೆಯಲ್ಲೂ 3 ಟಾಸ್ಕ್ ಗಳಿರುತ್ತವೆ. ಒಟ್ಟಾರೆ ಗೇಮ್ ನಲ್ಲಿ ಇಂತಹ ಒಟ್ಟು 30 ಮಿಷನ್ ಗೇಮ್ ಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
SCROLL FOR NEXT