ದೇಶ

371ನೇ ವಿಧಿಯಲ್ಲಿ ಯಾವುದೇ ಬದಲಾವಣೆಯಿಲ್ಲ: ಅಮಿತ್ ಶಾ ಭರವಸೆ

Lingaraj Badiger
ನವದೆಹಲಿ: ನಾಗಾಲ್ಯಾಂಡ್ ಸೇರಿದಂತೆ 7 ರಾಜ್ಯಗಳಿಗೆ ಸಂಬಂಧಿಸಿದ 371ನೇ ವಿಧಿಯನ್ನು ದುರ್ಬಲಗೊಳಿಸುವ ಅಥವಾ ಬದಲಾವಣೆ ಮಾಡುವ ಯಾವುದೇ ಚಿಂತನೆ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ
ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಕಾಶ್ಮೀರ ಪುನರ್ ರಚನೆ ಮತ್ತು 370ನೇ ವಿಧಿ ರದ್ದತಿ ಮಸೂದೆ ಮೇಲಿನ ಚರ್ಚೆಯ ವೇಳೆ ಈ ವಿಷಯ ತಿಳಿಸಿರುವ ಅವರು, 370 ಹಾಗೂ 371ನೇ ವಿಧಿಯ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದರು.
“ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು 371ನೇ ವಿಧಿಗೆ ಹೋಲಿಸಿ ದೇಶವನ್ನು ತಪ್ಪುದಾರಿಗೆ ಎಳೆಯದಿರಿ, 370ನೇ ವಿಧಿಯು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಸೇರಿದಂತೆ ಹಲವಾರು ರಾಜ್ಯಗಳೊಂದಿಗೆ ವ್ಯವಹರಿಸುವ 371ನೇ ವಿಧಿ ವಿಶೇಷ ನಿಬಂಧನೆಗಳ ಬಗ್ಗೆ ಮಾತ್ರ ಮಾತನಾಡುತ್ತದೆ” ಎಂದು ಸ್ಪಷ್ಟಪಡಿಸಿದರು
“ವಿಶೇಷವಾದ 371 ನೇ ವಿಧಿಯು ಸಂಬಂಧಪಟ್ಟ ರಾಜ್ಯಗಳಿಗೆ ನಿರ್ಧಿಷ್ಟ ಪ್ರಯೋಜನಗಳನ್ನು ಒದಗಿಸುತ್ತವೆ.  ಎರಡೂ ವಿಧಿಗಳನ್ನು ಹೋಲಿಸುವ ಅಗತ್ಯವಿಲ್ಲ ಹಾಗೂ 371ನೇ ವಿಧಿಯನ್ನು ಬದಲಿಸುವ ಯಾವುದೇ ಚಿಂತನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಿಲ್ಲವೆಂದ ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ 370ನೇ ವಿಧಿ ರದ್ದತಿಯ ಬಳಿಕ 371ನೇ ವಿಧಿಯನ್ನೂ ಬದಲಿಸುವ ಅಥವಾ ದುರ್ಬಲಗೊಳಿಸುವ ಕುರಿತು ಊಹಾಪೋಹ ಹಬ್ಬಿದ್ದರಿಂದ ನಾಗಾಲ್ಯಾಂಡ್ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳು ಆತಂಕಕ್ಕೆ ಒಳಗಾಗಿದ್ದವು. 
370ನೇ ವಿಧಿಯ ರದ್ದತಿಯು ಈಶಾನ್ಯ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆಯೇ ಎಂದು ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ, ಚರ್ಚೆಯ ವೇಳೆ ಪ್ರಶ್ನಿಸಿದ್ದರು.
SCROLL FOR NEXT