ದೇಶ

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಗೋಡೆಗೆ ಡಿಕ್ಕಿ: ಬಿಜೆಪಿ ಸಂಸದೆ ರೂಪಾ ಗಂಗೂಲಿ ಪುತ್ರನ ಬಂಧನ

Sumana Upadhyaya

ಕೋಲ್ಕತ್ತಾ: ಪಾನಮತ್ತ ಸ್ಥಿತಿಯಲ್ಲಿ ಕಾರು ಚಲಾಯಿಸಿ ಸಮತೋಲನ ಕಳೆದುಕೊಂಡು ಕೋಲ್ಕತ್ತಾ ಕ್ಲಬ್ ಗೋಡೆಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಜನತಾ ಪಾರ್ಟಿ ಸಂಸದೆ ರೂಪಾ ಗಂಗೂಲಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.


ದಕ್ಷಿಣ ಕೋಲ್ಕತ್ತಾದ ಸಂಸದರ ಮನೆಯ ಪಕ್ಕದಲ್ಲಿ ಆಕಾಶ್ ಮುಖ್ಯೋಪಾಧ್ಯಾಯ(20ವ) ತನ್ನ ಕಾರನ್ನು ಚಲಾಯಿಸಿ ತಿರುವು ತೆಗೆದುಕೊಳ್ಳುತ್ತಿದ್ದಾಗ ರಾಯಲ್ ಕೋಲ್ಕತ್ತಾ ಗಾಲ್ಫ್ ಕ್ಲಬ್ ನ ಗೋಡೆಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರು ನಜ್ಜುಗುಜ್ಜಾಗಿದೆ. 


ಸಣ್ಣಪುಟ್ಟ ಗಾಯಗಳಿಂದ ಆಕಾಶ್ ಪಾರಾಗಿದ್ದಾನೆ. ಕಾರು ಡಿಕ್ಕಿ  ಹೊಡೆದು ಅಲ್ಲಿನ ಶಬ್ದ ಕೇಳಿ ಆತನ ತಂದೆ ಹೊರಬಂದು ಮಗನನ್ನು ಕಾರಿನಿಂದ ಇಳಿಸಿ ಕಾಪಾಡಿದ್ದಾರೆ. ಕಾರು ಡಿಕ್ಕಿ  ಹೊಡೆದ ಸಂದರ್ಭದಲ್ಲಿ ಅಲ್ಲಿ ಹಲವರಿದ್ದರೂ ಕೂಡ ಯಾರಿಗೂ ಗಾಯಗಳಾಗಲಿ, ಪ್ರಾಣಾಪಾಯವಾಗಲಿ ಅದೃಷ್ಟವಶಾತ್ ಆಗಿಲ್ಲ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಆಕಾಶ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದರಿಂದ ಜಾದವ್ ಪುರ ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆಕಾಶ್ ನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.


ಈ ಪ್ರಕರಣ ನಡೆದ ಬಳಿಕ ಸಂಸದೆ ರೂಪಾ ಗಂಗೂಲಿ ಟ್ವೀಟ್ ಮಾಡಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ''ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ, ನಮ್ಮ ಮನೆಯ ಹತ್ತಿರವೇ ನನ್ನ ಮಗ ಅಪಘಾತಕ್ಕೀಡಾಗಿದ್ದಾನೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ. ಈ ವಿಚಾರದಲ್ಲಿ ಯಾವುದೇ ದಯೆ-ದಾಕ್ಷಿಣ್ಯ ವಹಿಸುವುದಾಗಲಿ, ಇದನ್ನು ರಾಜಕೀಯಗೊಳಿಸುವುದಾಗಲಿ ಬೇಡ. ನನಗೆ ನನ್ನ ಮಗನ ಮೇಲೆ ಪ್ರೀತಿಯಿದೆ, ಆತನ ಕಾಳಜಿ ನೋಡಿಕೊಳ್ಳುತ್ತೇನೆ, ಆದರೆ ಕಾನೂನು ಮಾತ್ರ ಅದರದೇ ಆದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.


ಅದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿದ ರೂಪಾ ಗಂಗೂಲಿ ನಾನು ಇವತ್ತು ಅಪರಾಹ್ನ ನನ್ನ ಮಗನ ಜೊತೆ ಮಾತನಾಡಿ ಅವನ ಊಟ ಮತ್ತು ಇತರ ವಿಚಾರಗಳ ಬಗ್ಗೆ ವಿಚಾರಿಸಿದೆ. ಈಗ ಮಾಧ್ಯಮದಿಂದ ಕೆಲವು ಮೂರ್ಖತನವಾದ ಟೀಕೆಗಳನ್ನು ಕೇಳುತ್ತಿದ್ದೇನೆ. ಇಂದು ಬೆಳಗ್ಗೆ 7.50ರ ವಿಮಾನಕ್ಕೆ ಅವನು ಹೋಗಿದ್ದ. ಇದೆಲ್ಲ ಎಂಥಹ ರಾಜಕೀಯ ಇಲ್ಲಸಲ್ಲದ ಆರೋಪಗಳು ಎಂದು ವೈರುಧ್ಯದ ಹೇಳಿಕೆ ನೀಡಿದ್ದಾರೆ.

SCROLL FOR NEXT