ದೇಶ

ಪತ್ನಿ ತಾನು ಕೊಟ್ಟ ಚ್ಯುಯಿಂಗ್ ಗಮ್ ತಿಂದಿಲ್ಲವೆಂದು ತಲಾಕ್ ನೀಡಿದ ಭೂಪ!

Raghavendra Adiga

ಲಖನೌ: ಪತ್ನಿ ತನ್ನಿಂದ ಚ್ಯುಯಿಂಗ್ ಗಮ್ ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಸಿವಿಲ್ ಕೋರ್ಟ್ ಆವರಣದೊಳಗೆ ವಕೀಲರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬ ತ್ರಿವಳಿ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಅಮ್ರಾಯ್ ಗ್ರಾಮದ ಸಿಮ್ಮಿ (30)ತನ್ನ ಪತಿ ಸೈಯದ್ ರಶೀದ್ ಅವರೊಂದಿಗೆ ಲಖನೌ ಸಿವಿಲ್ ನ್ಯಾಯಾಲಯಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಆಕೆ ತನ್ನ ಅಳಿಯನ ಕುರಿತಂತೆ ಈ ಹಿಂದೆ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರಣೆಗಾಗಿ.ನ್ಯಾಯಾಲಯಕ್ಕೆ ಹಾಜರಾಗಿದ್ದಳು.

ತನ್ನ ವಕೀಲರೊಂದಿಗೆ ಮಾತನಾಡುತ್ತಿದ್ದ ಪತ್ನಿಗೆ ಪತಿ ಚ್ಯುಯಿಂಗ್ ಗಮ್ ನೀಡಲು ಮುಂದಾಗಿದ್ದಾನೆ. ಆದರೆ ಪತ್ನಿ ಸಿಮ್ಮಿ ಅದನ್ನು ಸ್ವೀಕರಿಸಲಿಲ್ಲ. ಆಗ ಕುಪಿತನಾದ ಸೈಯದ್ ವಕೀಲರ ಸಮ್ಮುಖದಲ್ಲೇ ಮೂರು ಬಾರಿ "ತಲಾಕ್" ಹೇಳಿ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.

2004 ರಲ್ಲಿ ರಶೀದ್ ಅವರನ್ನು ವಿವಾಹವಾದ ಸಿಮ್ಮಿ ಈ ಹಿಂದೆ ತನ್ನ ಪತಿ ಮತ್ತು ಅಳಿಯಂದಿರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು ಎಂದು ಇಂದಿರಾ ನಗರ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ), ಎಸ್.ಬಿ.ಪಾಂಡೆ ಹೇಳಿದ್ದಾರೆ.

ರಶೀದ್ ವಿರುದ್ಧ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು  ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪಾಂಡೆ ಹೇಳಿದರು.

SCROLL FOR NEXT