ದೇಶ

ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಹೋಗಿದ್ದ ಸಿಬಿಐ ಕಚೇರಿ ಅತಿಥಿ ಗೃಹದಲ್ಲಿ ರಾತ್ರಿಯಿಡೀ ಕಳೆದ ಪಿ.ಚಿದಂಬರಂ!

Sumana Upadhyaya

ನವದೆಹಲಿ: ನಿರೀಕ್ಷಣಾ ಜಾಮೀನು ದೆಹಲಿ ಹೈಕೋರ್ಟ್ ನಿಂದ ತಿರಸ್ಕೃತವಾಗುತ್ತಿದ್ದಂತೆ ಬಂಧನಕ್ಕೆ ಬೆಂಬತ್ತಿ ನಿಂತ ಸಿಬಿಐ ಅಧಿಕಾರಿಗಳ ತಂಡಕ್ಕೆ ಕೊನೆಗೂ ರಾತ್ರಿ 10 ಗಂಟೆ ಸುಮಾರಿಗೆ ಸಿಕ್ಕಿದರು ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ.


ಅವರನ್ನು ಬಂಧಿಸಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕಾರಿನಲ್ಲಿ ಸಿಬಿಐ ಕೇಂದ್ರ ಕಚೇರಿಯ ಅತಿಥಿ ಗೃಹಕ್ಕೆ ಕರೆದುಕೊಂಡು ಬರಲಾಯಿತು. ಸಿಬಿಐ ಅತಿಥಿ ಗೃಹದ ಕೆಳ ಮಹಡಿಯಲ್ಲಿ ರಾತ್ರಿಯಿಡೀ ಕಳೆದರು ಚಿದಂಬರಂ. 


ವೈರುಧ್ಯವೆಂದರೆ ಇದೇ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿದಂಬರಂ ಭಾಗಿಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ 2008ರಿಂದ 2012ರವರೆಗೆ ಸಚಿವರಾಗಿದ್ದ ಚಿದಂಬರಂ ಅವರು ಇದೇ ಕಚೇರಿಯ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಆ ಸಮಾರಂಭ 2011ರ ಜೂನ್ 30ರಂದು ಅಂದಿನ ಪ್ರಧಾನಿ ಡಾ ಮನಮೋಹನ್ ಸಿಂಗ್ ಉಪಸ್ಥಿತಿಯಲ್ಲಿ ನೆರವೇರಿತ್ತು. ಅದಕ್ಕೆ ಚಿದಂಬರಂ ಮುಖ್ಯ ಅತಿಥಿಯಾಗಿ ಹೋಗಿದ್ದರು.


ಯುಪಿಎ ಸರ್ಕಾರದ 10 ವರ್ಷಗಳ ಆಡಳಿತಾವಧಿಯಲ್ಲಿಯೇ ಈ ಐಎನ್ಎಕ್ಸ್ ಮೀಡಿಯಾ ಅಕ್ರಮ ನಡೆಯಿತು ಎಂದು ಹೇಳಲಾಗುತ್ತಿದ್ದು ಅದರಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿರುವ ಚಿದಂಬರಂ ಅವರನ್ನು ನಿನ್ನೆ ದೆಹಲಿಯ ಅವರ ಜೊರ್ ಬಾಗ್ ನಿವಾಸದಿಂದ ಕಂಪೌಂಡ್ ಹಾರಿ ಹೋಗಿ ಸಿಬಿಐ ಅಧಿಕಾರಿಗಳ ತಂಡ ಬಂಧಿಸಿತ್ತು.

SCROLL FOR NEXT